ಬೆಂಗಳೂರು : ರಾಜ್ಯದ ಪ್ರಾಥಮಿಕ ಹಾಗು ಫ್ರೌಡಶಾಲಾ ಪಠ್ಯಪುಸ್ತಕ ಪರಿಷ್ಕರಣೆ ದಿನಕ್ಕೊಂದು ವಿವಾದ ಸೃಷ್ಟಿಸುತ್ತಿದೆ ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಸಮಿತಿ ಮಾಡಿದ ಎಡವಟ್ಟು ನೂರೆಂಟು ಸಮಸ್ಯೆ ಸೃಷ್ಟಿಸುತ್ತಿದೆ.
ಸಮಿತಿ ಮಾಡುತ್ತಿರುವ ಎಡವಟ್ಟಿನಿಂದಾಗಿ ವಿವಾದಗಳು ಒಂದೆಡೆಯಾದರೆ, ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ಹೊರೆ ಬೀಳುತ್ತಿದೆ. ಪಠ್ಯ ಪುಸ್ತಕದಿಂದ ಸಮಾಜ ಸುಧಾರಕ ನಾರಾಯಣಗುರು, ಸ್ವತಂತ್ರ ಸೇನಾನಿ ಕ್ರಾಂತಿಕಾರಿ ಭಗತ್ ಸಿಂಗ್ ಪಾಠ ಕೈಬಿಟ್ಟು ಪುಸ್ತಕಗಳು ಬಂದಿದ್ದವು.ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪುಸ್ತಕ ವಾಪಸ್ ಪಡೆದ ಇಲಾಖೆ ಕೆಲವು ವಿಷಯ ಸೇರಿಸಿ ಮರು ಮುದ್ರಣಕ್ಕೆ ಆದೇಶಿಸಿತು.ಇದರ ಪರಿಣಾಮ ಬೊಕ್ಕಸಕ್ಕೆ ಬರೋಬ್ಬರಿ ಮೂರು ಕೋಟಿ ಅಧಿಕ ಹೊರೆ ಬೀಳುವಂತಾಯಿತು.
ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಕೆಲಸ ಎಲ್ಲಾ ಬಿಟ್ಟ ಮಗ ಭಂಗಿ ನೆಟ್ಟ ಎಂಬಂತಾಗಿದೆ.
ಇದೀಗ ನಾಡಿನ ಹೆಮ್ಮೆಯ ಪುತ್ರ ಕನ್ನಡಿಗರ ಅಸ್ಮಿತೆಯ ಪ್ರಜ್ಞೆ ರಾಷ್ಟ್ರಕವಿ ಕುವೆಂಪು ಅತ್ಯಂತ ದೊಡ್ಡ ಸ್ಥಾನಕ್ಕೇರಿದ್ದು ಸ್ವ ಸಾಮರ್ಥ್ಯದಿಂದಲ್ಲ, ಬದಲಿಗೆ ಬೇರೆಯವರ ಪ್ರೋತ್ಸಾಹದಿಂದಂತೆ. ಇಂತಹ ಎಡವಟ್ಟನ್ನೂ ಕೂಡಾ ಈ ಸಮಿತಿ ಮಾಡಿದೆ.
ನಾಲ್ಕನೆ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ನಾಡಕವಿ ಕುವೆಂಪುಗೆ ಅವಮಾನ ಮಾಡಿದ್ದಾರೆ. ಕುವೆಂಪು ಕವಿ ಪರಿಚಯದ ವೇಳೆ ಕುವೆಂಪು ಅವರಿಗೆ ಕಥೆ, ಕವನ ಬರೆಯುವ, ಪುಸ್ತಕ ಓದುವ ಅಭ್ಯಾಸ ಇತ್ತು. ಅನೇಕರ ಪ್ರೋತ್ಸಾಹದಿಂದ ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಉಲ್ಲೇಖವಾಗಿದೆ
ರಾಮಾಯಣ ದರ್ಶನಂ ಮಹಾಕಾವ್ಯ ಬರೆದ ಕುವೆಂಪು ಅವರ ಸಾಹಿತ್ಯ ಕೌಶಲ್ಯವಿರಲಿಲ್ಲವೇ? ಬೇರೆಯವರ ಪ್ರೋತ್ಸಾಹದಿಂದ ಇವರು ದೊಡ್ಡ ಕವಿಯಾದ್ರಾ? ಎಂದು ಪ್ರಶ್ನಿಸುತ್ತಿರುವ ನಾಡಿನ ಪ್ರಜ್ಞಾವಂತರು ಸಮಿತಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯಡವಟ್ಟು ಸಮಿತಿ ರಚಿಸಿ ಇದರ ಅಧ್ವಾನಗಳನ್ನು ಸಮರ್ಥಿಸುತ್ತಿರುವ ಶಿಕ್ಷಣ ಸಚಿವ ನಾಗೇಶ್ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ.
ಆರ್‌ಎಸ್‌ಎಸ್ ಪ್ರೇರಿತ ಬ್ರಾಹ್ಮಣ್ಯ ಪಠ್ಯ ತಿರಸ್ಕರಿಸಬೇಕು ಮತ್ತು ಶಿಕ್ಷಣ ಸಚಿವ ನಾಗೇಶ್ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿ ಭಾನುವಾರ ಸಂಜೆಯಿಂದ ಆರಂಭವಾದ ಟ್ವಿಟರ್ ಅಭಿಯಾನ ಇಂದೂ ಮುಂದುವರೆದಿದ್ದು ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Previous Articleಕಣ್ಣಾ ಮುಚ್ಚಾಲೆ ಆಟ…ಚಿನ್ನದ ಜೊತೆ ಓಟ..
Next Article ಹಿಮಾಚಲ ಪ್ರದೇಶ ಪ್ರವಾಸೋದ್ಯಮಕ್ಕೆ ಭಾರೀ ಹಿನ್ನಡೆ