ಬೆಂಗಳೂರು,ಮೇ.5-
ಲೈಂಗಿಕ ಕಿರುಕುಳ ಹಾಗೂ ಮಹಿಳೆಯ ಅಪಹರಣ ಆರೋಪದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧಿತ ರಾಗಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ತಾವೇನೂ ತಪ್ಪು ಮಾಡಿಲ್ಲ ಅನಗತ್ಯವಾಗಿ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ರಾಜಕೀಯ ಕಾರಣಕ್ಕಾಗಿ ತಮ್ಮನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ತನಿಖಾಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ರೇವಣ್ಣ ಅವರನ್ನು ಕಳೆದ ರಾತ್ರಿ ಸಿಐಡಿ ಕೇಂದ್ರ ಕಚೇರಿಗೆ ಕರತಂದ ತನಿಖಾ ತಂಡ ಅವರಿಂದ ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡು ನಂತರ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಮತ್ತೆ ಸಿಐಡಿ ಕೇಂದ್ರ ಕಚೇರಿಗೆ ಕರೆ ತರಲಾಯಿತು.
ಅಲ್ಲಿ ತನಿಖಾ ತಂಡ ಪೂರೈಸಿದ ಭೋಜನ ಸೇವಿಸಿದ ರೇವಣ್ಣ ಅವರು ಕಣ್ಣೀರುಡುತ್ತಲೇ ತಮ್ಮನ್ನು ದ್ವೇಷದ ರಾಜಕಾರಣಕ್ಕಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ತಾವೇನೂ ತಪ್ಪೇ ಮಾಡಿಲ್ಲ ಎಂದು ಪದೇ ಪದೇ ಅಲವತ್ತು ಕೊಂಡರು ಎಂದು ಹೇಳಲಾಗಿದೆ.
ಇನ್ನು ಈ ಪ್ರಕರಣದಲ್ಲಿ ಯಾವುದೇ ತಪ್ಪು ಹೆಜ್ಜೆ ಇಡದಂತೆ ತನಿಖಾ ತಂಡ ಸಾಕಷ್ಟು ಎಚ್ಚರಿಕೆ ವಹಿಸಿದೆ. ರಾಜ್ಯದ ಪ್ರಭಾವಿ ರಾಜಕಾರಣಿಗಳ ವಿರುದ್ಧ ನಡೆಯುತ್ತಿರುವ ಈ ತನಿಖೆಯಲ್ಲಿ ಕೊಂಚ ಎಡವಟ್ಟಾದರೂ ಪ್ರಕರಣ ಬೇರೆ ಸ್ವರೂಪ ಪಡೆದುಕೊಳ್ಳಲಿದೆ ಎಂದು ತಿಳಿದು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ರೇವಣ್ಣ ವಿರುದ್ಧ ಕೇವಲ ಲೈಂಗಿಕ ಕಿರುಕುಳ ಆರೋಪ ಮಾತ್ರವಲ್ಲ ಅಪಹರಣ ಆರೋಪವು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅವರ ಮೊಬೈಲ್ ಅನ್ನು ವಶಕ್ಕೆ ಪಡೆದಿರುವ ಎಸ್ ಐಟಿ ಅಧಿಕಾರಿಗಳು ಅದರ ಪರಿಶೀಲನೆ ಕೈಗೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧವಾಗಲೀ ಅಥವಾ ಎಸ್‌ಐಟಿ ವಿರುದ್ಧವಾಗಲೀ ಯಾರೂ ಬೊಟ್ಟು ಮಾಡಬಾರದು ಎನ್ನುವ ಕಾರಣಕ್ಕೆ ತನಿಖೆಯ ಜತೆ ಜತಗೆ ಸಾಕ್ಷ್ಯಗಳ ಸಂಗ್ರಹಕ್ಕೂ ಮುಂದಾಗಲಾಗಿದೆ.
ಎಚ್.ಡಿ. ರೇವಣ್ಣ ಅವರ ಮೊಬೈಲ್ ಡೇಟಾ ಚಾಟಿಂಗ್, ಕಾಲ್ ಸಿಡಿಆರ್ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿ ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹ ಮಾಡಲಿದ್ದಾರೆ.
ಈ ಮೊಬೈಲ್‌ನಲ್ಲಿ ಡಿಲಿಟ್ ಆಗಿರುವ ಡೇಟಾಗಳನ್ನೂ ರಿಟ್ರೀವ್ ಮಾಡಿ ಅವುಗಳನ್ನು ಸಾಕ್ಷ್ಯವೆಂದು ಪರಿಗಣಿಸಲು ನಿರ್ಧಾರ ಮಾಡಲಾಗಿದೆ.
ಇದರ ನಡುವೆ ರೇವಣ್ಣ ಅವರಿಂದ ದೌರ್ಜನ್ಯಕ್ಕೆ ಒಳಗಾದವರು ಎಂದು ಹೇಳಲಾದ ಮತ್ತೆ ಮೂರು ಮಹಿಳೆಯರು ಎಸ್ಐಟಿ ಅಧಿಕಾರಿಗಳ ಸಂಪರ್ಕಕ್ಕೆ ಬಂದಿದ್ದು ಅವರು ನೀಡುವ ಮಾಹಿತಿ ರೇವಣ್ಣ ಅವರಿಗೆ ಗಂಡಾಂತರ ತಂದೊಡ್ಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ
ಈ ನಡುವೆ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ್ ಅವರು ಹೆಚ್ ಡಿ ರೇವಣ್ಣ ಅವರನ್ನು ಬಂಧಿಸಿದ್ದು ಸಹಜವಾಗಿ ಜೆಡಿಎಸ್ ನವರಿಗೆ ಬೇಸರ ಆಗಿದೆ. ಆದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳದಿದ್ದರೆ ಮುದೊಂದು ದಿನ ಎಸ್ಐಟಿ ಮೇಲೂ ಆರೋಪ ಮಾಡಬಹುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಪ್ರಜ್ವಲ್ ಬಗ್ಗೆ ಮಾತನಾಡಿದ ಪರಮೇಶ್ವರ್ ಈಗಾಗಲೇ ಬ್ಲ್ಯೂ ಕಾರ್ನರ್ ನೊಟೀಸ್ ಜಾರಿ ಮಾಡಿದ್ದಾರೆ. ಇಂಟರ್ ಪೋಲ್ ನವರು ಎಲ್ಲ ದೇಶಗಳಿಗೂ ಕಮ್ಯುನಿಕೇಟ್ ಮಾಡಿ ಲೊಕೇಟ್ ಮಾಡ್ತಾರೆ. ಬ್ಲ್ಯೂ ಕಾರ್ನರ್ ಅಂದರೆ ಎಲ್ಲಿದ್ದಾರೆ ಎನ್ನುವುದನ್ನು ಕಂಡುಹಿಡಿಯುತ್ತಾರೆ ಎಂದರು. ಆಮೇಲೆ ಪ್ರಜ್ವಲ್ ರನ್ನು ಹೇಗೆ ಸೆಕ್ಯುರ್ ಮಾಡಿ ಕರೆತರಬೇಕು ಎಂಬ ಬಗ್ಗೆ ಎಸ್ಐಟಿ ನಿರ್ಧಾರ ಮಾಡುತ್ತದೆ. ಎಸ್ಐಟಿ ದಿನನಿತ್ಯ ಏನು ಮಾಡುತ್ತೆ ಎಂದು ನಾನು ವಕ್ತಾರನಂತೆ ವರದಿ ಒಪ್ಪಿಸಲು ಸಾಧ್ಯವಿಲ್ಲ, ಎಸ್ಐಟಿ ಅದರ ಕೆಲಸವನ್ನು ಮಾಡುತ್ತದೆ. ದೂರು ಬಂದ ಬಳಿಕ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುತ್ತಿದೆ. ರೇವಣ್ಣ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಮುಂದೆ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತಾರೆ ಎಂದು ಹೇಳಿದರು.