ಮೈಸೂರು,ಫೆ.13-
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿವಾದಿತ ಪೋಸ್ಟರ್ ವಿಚಾರವಾಗಿ ಮೈಸೂರಿನ
ಉದಯಗಿರಿ ಪೊಲೀಸ್ ಠಾಣೆ ಗಲಭೆ ಪ್ರಕರಣ ಸಂಬಂಧ 1 ಸಾವಿರಕ್ಕೂ ಅಧಿಕ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
ಗಲಭೆಯಲ್ಲಿ ಇದ್ದವರು ಒಂದು ಸಾವಿರಕ್ಕೂ ಹೆಚ್ಚು ಎಂದು ಪೊಲಿಸರು ಅಧಿಕೃತವಾಗಿ ನಮೂದಿಸಿದ್ದಾರೆ. ಎಫ್‌ಐಆರ್ ಪ್ರತಿಯಲ್ಲಿ ಘಟನೆಯ ಸಂಪೂರ್ಣ ಮಾಹಿತಿ ಇದೆ.
ಆರಂಭದಲ್ಲಿ ವಿವಾದಿತ ಪೋಸ್ಟ್ ಹಾಕಿದ್ದ ಆರೋಪಿಯನ್ನು ಬಂಧನ ಮಾಡಿ ಠಾಣೆಯಲ್ಲಿ ಇರಿಸಲಾಗಿತ್ತು. ರಾತ್ರಿ 8:30 ಗಂಟೆಗೆ ಠಾಣೆಯ ಬಳಿ ಮುಸ್ಲಿಂ ಯುವಕರು ಜಮಾಯಿಸಿದರು. ಆರೋಪಿಯನ್ನು ನಮ್ಮ ವಶಕ್ಕೆ ಕೊಡಿ, ನಮ್ಮ ಧರ್ಮದ ಬಗ್ಗೆ ಮಾತನಾಡಿದ್ದಾನೆ ಎಂದು ಯುವಕರು ಕೂಗಾಟ ಆರಂಭಿಸಿದರು.
ರಾತ್ರಿ 9:15 ವೇಳೆ ಏಕಾಏಕಿ 1 ಸಾವಿರಕ್ಕೂ ಅಧಿಕ ಯುವಕರ ಗುಂಪು ಜಮಾವಣೆ ಆಗಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೂಗಾಟ ಮಾಡಿದರು.
ಪೊಲೀಸರು ಎಷ್ಟೇ ಹೇಳಿದರೂ ಕೇಳದ ಗುಂಪು ಏಕಾಏಕಿ ಪೊಲೀಸರ ಮೇಲೆ, ಠಾಣೆಯ ಮೇಲೆ ಕಲ್ಲು ತೂರಾಟ ಮಾಡಿದರು.
ಕಲ್ಲು ತೂರಾಟದಿಂದ ಪೊಲೀಸ್ ಠಾಣೆಯ ಗಾಜು, ಕಿಟಕಿ ಪುಡಿ ಪುಡಿ ಆಗಿದೆ. ಬಂದೋಬಸ್ತ್‌ನಲ್ಲಿದ್ದ ಪೊಲೀಸರ ಮೇಲೆಯೂ ಕಲ್ಲು ತೂರಾಟ ಮಾಡಿದರು. ರಸ್ತೆ ಮೇಲೆ ವಾಹನ ಓಡಾಟ ಮಾಡದಂತೆ ಬೆಂಕಿ ಹಚ್ಚಿ ಪುಂಡಾಟ ಮಾಡಿದರು. ಪೊಲೀಸರ ಮೇಲೆ ಮನಬಂದಂತೆ ಕಲ್ಲು ತೂರಾಟ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇದರಿಂದ ಹಲವರು ಪೊಲೀಸರಿಗೆ ಗಾಯವಾದವು.
ಕಲ್ಲು ತೂರಾಟದಿಂದ ಸಾರ್ವಜನಿಕರಿಗೂ ಗಾಯವಾಗಿದೆ. ಡಿಸಿಪಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದರು. ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕರೆಸಿ ಬಲವಂತವಾಗಿ ಯುವಕರ ಗುಂಪು ಚದುರಿಸಲಾಯಿತು.
ಅಧಿಕಾರಿಗಳ ಮೇಲೆ ಹಲ್ಲೆ ನಿಂದನೆ, ಸರ್ಕಾರಿ ಆಸ್ತಿ ವಾಹನಗಳ ಜಖಂ ಸೇರಿ ಆಸ್ತಿಪಾಸ್ತಿ ಹಾನಿಯಾಗಿದೆ. ಅಕ್ರಮ ಗುಂಪು ಕಟ್ಟಿ ಹಾನಿಯುಂಟು ಮಾಡಿದ ಯುವಕರ ಗುಂಪಿನ ಮೇಲೆ ಕ್ರಮಕ್ಕೆ ಎಂದು ಉದಯಗಿರಿ ಠಾಣೆಯ ಪಿಎಸ್‌ಐ ಸುನೀಲ್ ದೂರು ನೀಡಿದ್ದರು.ಇದರ ಆಧಾರದಲ್ಲಿ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ