ಬೆಂಗಳೂರು.
ಕನ್ನಡ ಚಿತ್ರರಂಗದಲ್ಲಿ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಸುರಕ್ಷತೆಯ ವಾತಾವರಣ ಇಲ್ಲ. ಕೆಲಸ ವಾತಾವರಣವಂತೂ ಇಲ್ಲವೇ ಇಲ್ಲ. ಮಹಿಳೆಯರಂತೆ ಪುರುಷರು ಕೂಡ ದೊಡ್ಡ ಪ್ರಮಾಣದಲ್ಲಿ ಲೈಂಗಿಕ ಕಿರುಕುಳ ಮತ್ತು ಶೋಷಣೆಗೆ ಒಳಪಡುತ್ತಿದ್ದಾರೆ.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಫಿಲ್ಮ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಸಂಸ್ಥೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿರುವ ಅಂಶ.
ಲೈಂಗಿಕ ಹಿಂಸೆಯ ಸಮಸ್ಯೆಗಳೂ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಇನ್ನಿತರೆ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಈ ಸಂಸ್ಥೆ ಮನವಿ ಮಾಡಿದೆ.
ಎಲ್ಲ ಮಹಿಳಾ ಕಲಾವಿದರಿಗೆ ತಾರತಮ್ಯವಿಲ್ಲದಂತೆ, ಆರೋಗ್ಯಯುತವಾದ ಕೆಲಸದ ವಾತಾವರಣ ಸೃಷ್ಟಿಸಲು ಅಗತ್ಯ ನೀತಿಗಳನ್ನು ರೂಪಿಸಬೇಕು. ಚಿತ್ರೀಕರಣ ಸ್ಥಳದಲ್ಲಿ ಕಲಾವಿದೆಯರಿಗೆ ಸುರಕ್ಷತೆ ಮತ್ತು ಕನಿಷ್ಠ ಸವಲತ್ತುಗಳನ್ನು ಒದಗಿಸಬೇಕೆಂದು ಸಂಸ್ಥೆ ಪತ್ರದಲ್ಲಿ ಸರ್ಕಾರವನ್ನು ಒತ್ತಾಯಿಸಿದೆ