ಬೆಂಗಳೂರು,ಜೂ.28-
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಹಲವು ಕಠಿಣ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಗೃಹರಕ್ಷಕ ಮತ್ತು ಅಗ್ನಿಶಾಮಕದಳದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕಮಲ್ ಪಂತ್ ಅವರು ದಿನ(ಜೂ.30)ಗಳಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಕರ್ನಾಟಕ ಕೇಡರ್ ನ 1992ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ಉತ್ತರಾಖಂಡ ಮೂಲದ ಕಮಲ್ ಪಂತ್ ಅವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ 34 ವರ್ಷಗಳ ಕಾಲ ನಿಷ್ಕಳಂಕ,ನಿಷ್ಠಾವಂತ,ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.
ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಶಿವಮೊಗ್ಗದಲ್ಲಿ ಸೇವೆ ಆರಂಭಿಸಿದ್ದ ಕಮಲ್ ಪಂತ್ ಅವರು ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳ ಎಸ್‌ಪಿಯಾಗಿ ಕೇಂದ್ರವಲಯದ ಐಜಿಪಿ,ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಲ್ಲಿಂದ ಎಡಿಜಿಪಿ ಹುದ್ದೆಗೆ ಬಡ್ತಿ ಪಡೆದರು.
ಆಡಳಿತ,ಕಾನೂನು ಸುವ್ಯವಸ್ಥೆ, ಗುಪ್ತಚರದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ)ರಾಗಿ ಬಳಿಕ ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ನೇಮಕಗೊಂಡಿದ್ದರು.
ಡಿಜಿಪಿ ಹುದ್ದೆಗೆ ಬಡ್ತಿ ಹೊಂದಿದರೂ ಎರಡು ಬಾರಿ ನಗರ ಪೊಲೀಸ್ ಕಮೀಷನರ್ ಹುದ್ದೆಗೆ ವಿಸ್ತರಣೆ ಹೊಂದಿದ ಕಮಲ್ ಪಂತ್ ಅವರು
ಪೂರ್ವ ವಿಭಾಗದಲ್ಲಿ ನಡೆದ ಭಾರೀ ಗಲಭೆ, ಡಿಜೆ ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ನಡೆದ ದಾಳಿ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದ್ದರು.
ಅತ್ಯುತ್ತಮ ಕಮಿಷನರ್:
ಸ್ಯಾಂಡಲ್ ವುಡ್ ನ ಹಲವು ನಟ-ನಟಿಯರು ಸಿಲುಕಿದ್ದ ಡ್ರಗ್ಸ್ ಪ್ರಕರಣ, ಬಿಟ್‌ಕಾಯಿನ್ ಹಗರಣ ಸೇರಿ ಹಲವು ಸವಾಲಾಗಿದ್ದ ಪ್ರಕರಣಗಳನ್ನು ವಿವಾದಗಳಿಗೆ ಎಡೆಮಾಡದೇ ನಿಭಾಯಿಸಿ ರಾಜ್ಯ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲು ಕಾರಣರಾಗಿದ್ದರು.
ತಮ್ಮ ಅಧಿಕಾರಾವಧಿಯಲ್ಲಿ ಹಲವು ಸೂಕ್ಷ್ಮ ಪರಿಸ್ಥಿತಿಯನ್ನು ನಿಭಾಯಿಸಿ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಂಡು ಕೆಳಹಂತದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯುತ್ತಮ ಕಮೀಷನರ್ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದರು.
2015ರಲ್ಲಿ ಕಾರಾಗೃಹ ಎಡಿಜಿಪಿಯಾಗಿ, ಲೋಕಾಯುಕ್ತ ಕಚೇರಿಯಲ್ಲಿ ನಡೆದಿದ್ದ ಬಹುಕೋಟಿ ಭ್ರಷ್ಟಾಚಾರ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಅವರು, ಅಂದಿನ ಲೋಕಾಯುಕ್ತರ ಪುತ್ರ ಹಾಗೂ ಇತರ ಆರೋಪಿಗಳ ಪಟ್ಟಿ ಸಲ್ಲಿಸಿದ್ದರು.
ರಾಜ್ಯದಲ್ಲಿ ಪೊಲೀಸ್ ಸೇವೆಯಿಂದ ನನ್ನ ವೃತ್ತಿಜೀವನದುದ್ದಕ್ಕೂ ದೊರೆತ ಮನ್ನಣೆ ಮತ್ತು ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ ಸಂತೃಪ್ತನಾಗಿ ನಿವೃತ್ತನಾಗುತ್ತಿದ್ದೇನೆ ಎನ್ನುತ್ತಾರೆ ಕಮಲ್ ಪಂತ್.