ಬೆಂಗಳೂರು.
ಚುಟುಕು ಕ್ರಿಕೆಟ್ ಎಂದು ಪರಿಗಣಿಸಲಾಗುತ್ತಿರುವ ಟಿ20 ಐಪಿಎಲ್ ಪಂದ್ಯಾವಳಿಗಳು ದೇಶಾದ್ಯಂತ ಕ್ರಿಕೆಟ್ ಪ್ರೇಮಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿವೆ.
ಮೈದಾನದಲ್ಲಿ ಈ ಕ್ರಿಕೆಟ್ ಪಂದ್ಯಗಳನ್ನು ನೋಡಲು ಕ್ರೀಡಾ ಪ್ರೇಮಿಗಳು ಹಾತೊರೆಯುತ್ತಿದ್ದಾರೆ. ನಿಗದಿಪಡಿಸಿದಷ್ಟು ಹಣ ನೀಡಿ ಟಿಕೆಟ್ ಖರೀದಿಸಿ ಪಂದ್ಯ ವೀಕ್ಷಿಸುವ ಕ್ರಿಕೆಟ್ ಪ್ರೇಮಿಗಳಿಗೆ ಸಂಬಂಧಪಟ್ಟ ಕ್ರಿಕೆಟ್ ಸಂಸ್ಥೆಗಳು ಎಲ್ಲ ವ್ಯವಸ್ಥೆ ಮಾಡುತ್ತವೆ.
ಆದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಉಸ್ತುವಾರಿ ಹೊತ್ತಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆ ಇದಕ್ಕೆ ಅಪವಾದವಾಗಿದೆ.
ಐಪಿಎಲ್‌ನ ಪಂದ್ಯ ವೀಕ್ಷಣೆಗೆ ಬಂದಿದ್ದ ವೇಳೆ ಕಳಪೆ ಆಹಾರ ವಿತರಣೆ ಮಾಡಲಾಗಿದೆ ಎಂದು ಆರೋಪಿಸಿ ಯುವಕ ದೂರು ನೀಡಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಕ್ಯಾಂಟೀನ್ ವ್ಯವಸ್ಥಾಪಕರ ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮೇ 12ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಕ್ರಿಕೆಟ್ ಪಂದ್ಯ ವೀಕ್ಷಿಸಲು ಚೈತನ್ಯ ಅವರು ಬಂದಿದ್ದರು. ಪಂದ್ಯ ನಡುವೆ ಕ್ಯಾಂಟೀನ್‌ನಲ್ಲಿ ಊಟ ಸೇವಿಸಿದ್ದರು. ಊಟ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಬಳಿಕ ಅವರು ಕುಸಿದು ಬಿದ್ದಿದ್ದರು. ಸಿಬ್ಬಂದಿ ನೆರವಿನಿಂದ ಆಂಬುಲೆನ್ಸ್ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಚೈತನ್ಯ ಅವರನ್ನು ಪರೀಕ್ಷಿಸಿದ್ದ ವೈದ್ಯರು ಫುಡ್ ಪಾಯಿಸನ್ ಆಗಿದೆ ಎಂದು ಹೇಳಿದ್ದರು.
ಆರೋಗ್ಯ ಹದಗೆಡಲು ಕ್ಯಾಂಟೀನ್‌ನಲ್ಲಿ ನೀಡಿದ ಆಹಾರವೇ ಕಾರಣ. ಹೀಗಾಗಿ ಕೆಎಸ್ಸಿಎ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.