Bengaluru
ಕಳೆದ ಕೆಲವಾರು ದಿನಗಳಿಂದ ತೀವ್ರ ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರಿದ್ದ ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್. ವರ್ಮಾ (Dr. B.K.S. Varma) ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ವರ್ಮಾ ಅವರು ಕಳೆದ ಮೂರು ತಿಂಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅತ್ತಿಬೆಲೆ ತಾಲೂಕಿ ಕರ್ನೂರಿನಲ್ಲಿ 1949ರಲ್ಲಿ ಜನಿಸಿದ ಬಿಕೆಎಸ್ ವರ್ಮಾ ತಮ್ಮ 6 ನೇ ವಯಸ್ಸಿನಲ್ಲೇ ಹವ್ಯಾಸವಾಗಿ ರೇಖಾಚಿತ್ರ ಪ್ರಾರಂಭಿಸಿದರು. ಕಲಾ ಪ್ರಪಂಚಕ್ಕೆ ವರ್ಮಾ ಎಂದು ಪರಿಚಿತರಾಗಿರುವ ಅವರ ಬಾಲ್ಯದ ಹೆಸರು, ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ.
ಜಯಲಕ್ಷ್ಮಮ್ಮ ಮತ್ತು ಸಂಗೀತ ಶಾಸ್ತ್ರಜ್ಞ ಪಂ.ಕೃಷ್ಣಚಾರ್ ದಂಪತಿಯ ಪುತ್ರ ಬಿಕೆಎಸ್. ಕೇವಲ 2ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಇವರು ಚಿಕ್ಕಂದಿನಲ್ಲೇ ಹಟವಾದಿಯಾಗಿದ್ದರು. ನಂತರ ಬಿಕೆಎಸ್ ಎ.ಎನ್.ಸುಬ್ಬರಾವ್ ಕಲಾಮಂದಿರ (A N Subba Rao, Kalamandir) ದಲ್ಲಿ ಚಿತ್ರಕಲಾಭ್ಯಾಸ ಮಾಡಿದ್ದರು.
ಒಮ್ಮೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಾಜಾ ರವಿವರ್ಮಾರವರ ಪೇಂಟಿಂಗ್ ಗಳನ್ನು ವೀಕ್ಷಿಸುತ್ತಿದ್ದಾಗ ತನ್ಮಯರಾಗಿ ವರ್ಮಾ ಎಂಬ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡರು. ಇದಾದ ನಂತರ ಇವರ ಕಲಾ ಬದುಕಿನ ಚಿತ್ರಣವೇ ಬದಲಾಯಿತು. ಪರಿಸರ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರ ಬರೆಯುವ ಮೂಲಕ ಎಲ್ಲರ ಗಮನಸೆಳೆದಿದ್ದ ಬಿಕೆಎಸ್ ವರ್ಮಾ ಅವರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು.
ಬಿಕೆಎಸ್ ಕಲೆಯನ್ನು ಮೇರುನಟ ಡಾ.ರಾಜ್ ಕುಮಾರ್, ರಜನಿಕಾಂತ್, ಅಂತಾರಾಷ್ಟ್ರೀಯ ಸುಪ್ರಸಿದ್ಧ ಕಲಾವಿದ ಡಾ.ರೋರಿಕ್ ಮತ್ತು ದೇವಿಕಾರಾಣಿ ದಂಪತಿ ಮೆಚ್ಚಿದ್ದರು.
ಚಿತ್ರಗಳ ಕೃಪೆ – ಅಂತರ್ಜಾಲ