ದೇಶದ ಗಮನ ಸೆಳೆದ ರಾಜಸ್ಥಾನ ವಿಧಾನಸಭೆ Election ಫಲಿತಾಂಶ ಪ್ರಕಟವಾಗಿದೆ.ಇತಿಹಾಸ ಸೃಷ್ಟಿಸುವ ಕಾಂಗ್ರೆಸ್ ನ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹಲವು ಸಮೀಕ್ಷೆಗಳು ನುಡಿದ ‘ಭವಿಷ್ಯ’ ನಿಜವಾಗಿದೆ.
ರಾಜಸ್ಥಾನದ ಮತದಾರರು ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುವ ಸಂಪ್ರದಾಯ ವನ್ನು 25 ವರ್ಷಗಳಿಂದ ಅನುಸರಿಸಿಕೊಂಡು ಬಂದಿದ್ದಾರೆ. ಈ ಸಂಪ್ರದಾಯ ಈ ಸಲ ಮುರಿಯಲಿದೆ ಎಂದು ಕಾಂಗ್ರೆಸ್ ಬಲವಾಗಿ ನಂಬಿತ್ತು.
ಹಲವು ಉಚಿತ ಕೊಡುಗೆಗಳ ಮೂಲಕ ಮತದಾರರ ಮನಗೆಲ್ಲಲು ಪ್ರಯತ್ನ ನಡೆಸಿದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರು ಅಲ್ಪ ಸಂಖ್ಯಾತರು,ಆದಿವಾಸಿಗಳು ಮತ್ತು ಪರಿಶಿಷ್ಟ ಜಾತಿಗಳ ಮತದಾರರು ತಮ್ಮ ಕೈಹಿಡಿಯಲಿದ್ದಾರೆ ಎಂಬ ನಂಬಿಕೆಯೊಂದಿಗೆವಬಹುಮತ ಗಳಿಸುವ ವಿಶ್ವಾಸ ಹೊಂದಿದ್ದರು.
ಈ ಅತಿಯಾದ ವಿಶ್ವಾಸ ಹಾಗೂ ಗೆಹಲೋಟ್ ಅವರ ವಯಸ್ಸು ಈ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದೆ.ಇದರ ಜೊತೆಗೆ ಕೊನೆಯ ಹಂತದಲ್ಲಿ ಪ್ರಧಾನಿ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರೊಂದಿಗೆ ಏರ್ಪಟ್ಟ ಸಂಧಾನ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಯಡಿಯೂರಪ್ಪ ಅವರಂತಹ ವರ್ಚಸ್ವಿ ನಾಯಕರ ಕಡೆಗಣನೆ ಪ್ರಮುಖ ಕಾರಣ ಎಂದು ಮನಗಂಡ ಪ್ರಧಾನಿ ಮೋದಿ ನೇತೃತ್ವದ ಕಮಲ ಪಡೆ ಕರ್ನಾಟಕದ ಯಡಿಯೂರಪ್ಪ ಅವರಂತೆ ರಾಜಸ್ಥಾನದಲ್ಲಿ ದೊಡ್ಡ ಪ್ರಭಾವ ಹೊಂದಿರುವ ವಸುಂಧರಾ ಅವರ ಕಡೆಗಣನೆ ಸರಿಯಲ್ಲ ಎಂದು ಅವರ ನಾಯಕತ್ವಕ್ಕೆ ನೀಡಿದ ಮನ್ನಣೆ ಬಿಜೆಯನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿತು.
ನಿಜವಾಗಿಯೂ ಇಲ್ಲಿ ಕಾಂಗ್ರೆಸ್ ಇತಿಹಾಸ ಸೃಷ್ಟಿಸುವ ಅವಕಾಶ ಹೊಂದಿತ್ತು. ಗೆಹಲೋಟ್ ಸರ್ಕಾರದ ವಿರುದ್ಧ ಅಂತಹ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಆರೋಪಗಳಿರಲಿಲ್ಲ.ಸರ್ಕಾರದ ಕಾರ್ಯಕ್ರಮಗಳು ಜನರ ವಿಶ್ವಾಸ ಗಳಿಸಿದ್ದವು.ಶಾಸಕರ ವಿರುದ್ಧ ಅಂತಹ ದೊಡ್ಡ ಪ್ರಮಾಣದ ಆಡಳಿತ ವಿರೋಧಿ ಅಲೆಯೂ ಇರಲಿಲ್ಲ. ಈ ಕಾರಣದಿಂದಲೇ ಕಾಂಗ್ರೆಸ್ ಇತಿಹಾಸ ಸೃಷ್ಟಿಸುವ ವಿಶ್ವಾಸ ಹೊಂದಿತ್ತು.
ಆದರೆ ಮತದಾರರು ಮಾತ್ರ ಕೈ ಹಿಡಿಯಲಿಲ್ಲ.ಇದಕ್ಕೆ ಪ್ರಮುಖ ಕಾರಣ ಯುವ ನಾಯಕ ಸಚಿನ್ ಪೈಲೆಟ್ ಅವರಿಗೆ ಅವಕಾಶ ನಿರಾಕರಣೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಗೆಹಲೋಟ್ ಮುಖ್ಯಮಂತ್ರಿ ಆಗಲಿದ್ದಾರೆ. ಇಷ್ಟೊಂದು ವಯಸ್ಸಾದರೂ ಅವರಿಗೆ ಅಧಿಕಾರ ಬಿಡುವ ಮನಸ್ಸಿಲ್ಲ.ಇಷ್ಟೊಂದು ವಯಸ್ಸಿನ ವ್ಯಕ್ತಿ ಮುಖ್ಯಮಂತ್ರಿ ಆದರೆ ಹೇಗೆ ಎಂದು ಮತದಾರ ಯೋಚಿಸಿದ.ಎಷ್ಟೇ ವರ್ಚಸ್ಸು ಬೆಂಬಲವಿದ್ದರೂ ಪೈಲೆಟ್ ಅವರಿಗೆ ಉನ್ನತ ಹುದ್ದೆ ಸಿಗುವುದೇ ಇಲ್ಲ ಎಂದು ಬಲವಾಗಿ ನಂಬಿದ ಮತದಾರ ಕೈಬಿಟ್ಟು ಕಮಲಕ್ಕೆ ಶರಣಾದರು.
ಕಾಂಗ್ರೆಸ್ ಉನ್ನತ ನಾಯಕತ್ವ ಇಲ್ಲಿ ತನ್ನ ಕಾರ್ಯತಂತ್ರ ಬದಲಾಯಿಸಿ,ಯುವ ಮುಖಗಳಿಗೆ ಅದ್ಯತೆ ನೀಡಿ,ಪೈಲೆಟ್ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿ,ಅಧಿಕಾರಕ್ಕೆ ಬಂದರೆ ಪೈಲೆಟ್ ಮುಖ್ಯಮಂತ್ರಿ ಎಂಬುದನ್ನು ಬಿಂಬಿಸಿದ್ದರೆ ಖಂಡಿತವಾಗಿ ಇತಿಹಾಸ ಸೃಷ್ಟಿಯಾಗುತ್ತಿತ್ತು.