ಬೆಂಗಳೂರು, ನ.26 : ಭಾರಿ ನಿರೀಕ್ಷೆಯೊಂದಿಗೆ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ (Karnataka Congress) ಪಕ್ಷ ಇದೀಗ ಮುಂಬರುವ ಲೋಕಸಭಾ Electionಯಲ್ಲಿ ಅತ್ಯಧಿಕ ಸ್ಥಾನ ಗಳಿಸುವತ್ತ ಗಮನ ಹರಿಸಿದೆ
ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಅದೇ ಅಂಕಿ-ಅಂಶಗಳ ಆಧಾರದ ಮೇಲೆ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಕಾರ್ಯತಂತ್ರದ ಮೊರೆ ಹೋಗಿದೆ.
ಒಂದು ಕಾಲಕ್ಕೆ ಕಾಂಗ್ರೆಸ್ ಭದ್ರಕೋಟೆ ಎನ್ನಲಾಗಿದ್ದ ಕ್ಷೇತ್ರಗಳು ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಕೈ ಬಿಟ್ಟಿವೆ.ಇವುಗಳನ್ನು ಮತ್ತೆ ಕೈವಶ ಮಾಡಿಕೊಳ್ಳಲು ರಣತಂತ್ರ ರೂಪಿಸುತ್ತಿರುವ ಕೈ ಪಡೆ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದೆ.
ಎಲ್ಲಾ 28 ಕ್ಷೇತ್ರಗಳಿಗೂ ಮಂತ್ರಿಗಳನ್ನು ಉಸ್ತುವಾರಿಗಳಾಗಿ ನೇಮಕ ಮಾಡಿದ್ದು,ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣೆ ಕಾರ್ಯತಂತ್ರ ರೂಪಿಸಲು ಸೂಚಿಸಲಾಗಿದೆ. ಇವರುಗಳು ಕ್ಷೇತ್ರದ ಮುಖಂಡರ ಸಭೆ ನಡೆಸುತ್ತಿದ್ದು,ರಾಜ್ಯದ ಮೇಲ್ಮಟ್ಟದ ಸಮಿತಿಗೆ ವರದಿ ರವಾನಿಸಿದ್ದಾರೆ.
ಈ ವರದಿ ಪರಿಶೀಲಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸರ್ಜೇವಾಲಾ,ವೇಣುಗೋಪಾಲ್ ನೇತೃತ್ವದ ತಂಡ ಎಲ್ಲವನ್ನೂ ಪರಿಶೀಲನೆ ಮಾಡಿದೆ. ಕಳೆದ ಮೂರು ಚುನಾವಣೆಗಳಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳು,ಅವರು ಗಳಿಸಿದ ಮತಗಳು, ಚುನಾವಣೆಯಲ್ಲಿ ರೂಪಿಸಿದ ಕಾರ್ಯತಂತ್ರವನ್ನು ಸಂಪೂರ್ಣ ಪರಿಶೀಲಿಸಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳೇ ಇಲ್ಲ ಎಂದು ಹೇಳಿದ್ದು, ಗೆಲ್ಲುವ ಕುದುರೆಗಳನ್ನು ಹುಡುಕಿ ಸರಿಯಾದ ಕಾರ್ಯ ತಂತ್ರ ರೂಪಿಸುವಂತೆ ಹೇಳಿರುವುದಾಗಿ ಗೊತ್ತಾಗಿದೆ.
ಪ್ರಮುಖವಾಗಿ ರಾಜಧಾನಿ ಬೆಂಗಳೂರಿನ ಕೇಂದ್ರ,ದಕ್ಷಿಣ, ಮತ್ತು ಉತ್ತರ,ಬೆಳಗಾವಿ,ಚಿಕ್ಕೋಡಿ, ಧಾರವಾಡ, ಹಾವೇರಿ, ವಿಜಯಪುರ, ಬಾಗಲಕೋಟೆ, ದಾವಣಗೆರೆ, ಶಿವಮೊಗ್ಗ,ದಕ್ಷಿಣ ಕನ್ನಡ,ಉತ್ತರ ಕನ್ನಡ ಕ್ಷೇತ್ರಕ್ಕೆ ಇಲ್ಲಿಯವರೆಗೂ ಸೂಕ್ತ ಅಭ್ಯರ್ಥಿಗಳೇ ಸಿಕ್ಕಿಲ್ಲ.
ಇದಷ್ಟೇ ಅಲ್ಲ ಮೈಸೂರು-ಕೊಡಗು ಕ್ಷೇತ್ರ, ಮಂಡ್ಯ, ಹಾಸನ, ಚಾಮರಾಜನಗರ, ಕೋಲಾರ, ತುಮಕೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವಿನ ಪತಾಕೆ ಹಾರಿಸುವ ಅಭ್ಯರ್ಥಿಗಳೇ ಕಾಣುತ್ತಿಲ್ಲ.
ಪಕ್ಷದ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ ಎಂಬ ಕಾರಣಕ್ಕೆ ಅನೇಕರು ಚುನಾವಣೆ ಸ್ಪರ್ಧೆಗೆ ಆಸಕ್ತಿ ತೋರುತ್ತಿದ್ದರೂ ಅವರಲ್ಲಿ ಗೆಲ್ಲುವ ಸಾಮರ್ಥ್ಯ ಕಾಣುತ್ತಿಲ್ಲ ಎನ್ನಲಾಗಿದೆ.
ಈ ಕೊರತೆಯನ್ನು ನೀಗಿಸಲು ಬಿಜೆಪಿ ಹಾಗೂ ಜೆಡಿಎಸ್ ನಿಂದ ವರ್ಚಸ್ವಿ ಹಾಗೂ ಪ್ರಭಾವಿ ಮುಖಂಡರನ್ನು ಸೆಳೆಯುವ ಪ್ರಯತ್ನ ತೆರೆಮರೆಯಲ್ಲಿ ನಡೆದಿತ್ತು. ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ಜೆಡಿಎಸ್ ಸೇರಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕಗೊಂಡಿರುವುದು ಇದಕ್ಕೆ ಹಿನ್ನಡೆಯಾದಂತಾಗಿದೆ.
ಕಾಂಗ್ರೆಸ್ ಸೇರಲು ಮೊದಲು ಆಸಕ್ತಿ ತೋರಿದ್ದ ಕೆಲವು ಮುಖಂಡರು ತಮ್ಮ ಪಕ್ಷಗಳಲ್ಲಾದ ಬೆಳವಣಿಗೆಯಿಂದ ಹಿಂದಕ್ಕೆ ಸರಿದಿದ್ದಾರೆ.ಇದು ಕಾಂಗ್ರೆಸ್ ನಾಯಕರ ತಲೆ ನೋವಿಗೆ ಕಾರಣವಾಗಿದೆ. ಹೀಗಾಗಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ನಡೆಸಿದ್ದಾರೆ. ಪಂಚರಾಜ್ಯಗಳ ಚುನಾವಣೆ ನಂತರ ಈ ಬಗ್ಗೆ ಗಮನ ಹರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.