ಬೆಂಗಳೂರು, ಜೂ. 29:
ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ನಾಯಕತ್ವ ಬದಲಾವಣೆ ಹಾಗೂ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರದ ಬಗ್ಗೆ ಮಾತನಾಡದಂತೆ ಕಾಂಗ್ರೆಸ್ ನಾಯಕರ ಬಾಯಿಗೆ ಹೈಕಮಾಂಡ್ ಬೀಗ ಹಾಕಿದೆ.
ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಈ ಕುರಿತಂತೆ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಇದಕ್ಕೆ ಅವಕಾಶ ನೀಡಬಾರದು ಎಂದು ಹೈಕಮಾಂಡ್ ನಾಯಕರು ಸಲಹೆ ಮಾಡಿದ್ದಾರೆ
ಇದರ ಬೆನ್ನಲ್ಲೇ ಕ್ರಮಕ್ಕೆ ಮುಂದಾಗಿರುವ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಇನ್ನು ಮುಂದೆ ಕಾಂಗ್ರೆಸ್ ನಾಯಕರು ಸಿಎಂ, ಡಿಸಿಎಂ ವಿಚಾರವಾಗಿ ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮುಂದೆ ಮಾತನಾಡಬಾರದು.ಇದನ್ನು ಉಲ್ಲಂಘಿಸಿ ಮಾತನಾಡುವವರಿಗೆ ವಿಧಿಯಿಲ್ಲದೇ ನೋಟಿಸ್ ಕೊಟ್ಟು, ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಬಹಿರಂಗ ಹೇಳಿಕೆ ನೀಡುವವರು ಎಐಸಿಸಿ ಮತ್ತು ರಾಜ್ಯ ಘಟಕದಿಂದ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಪಕ್ಷಕ್ಕೆ ಶಿಸ್ತು ಮುಖ್ಯ. ಶಿಸ್ತಿಲ್ಲದೆ ಯಾವುದೇ ಪಕ್ಷವಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟ ಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಇಂದು ಇವರುಗಳು ಸುಖಾಸುಮ್ಮನೆ ಮಾತನಾಡುವ ಅವಶ್ಯಕತೆಯಿಲ್ಲ” ಎಂದು ಹೇಳಿದರು
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಸಲಹೆಯಂತೆ, ನಾನು, ಸಿದ್ದರಾಮಯ್ಯ ಅವರು ಪಕ್ಷದ ಹಿತ ದೃಷ್ಟಿಯಿಂದ ಹೇಗೆ ಕೆಲಸ ಮಾಡಬೇಕು ಎನ್ನುವ ಬಗ್ಗೆ ತೀರ್ಮಾನಕ್ಕೆ ಬಂದಿದ್ದೇವೆ. ಈ ವಿಚಾರವಾಗಿ ಯಾವುದೇ ಮಂತ್ರಿಗಳು, ಶಾಸಕರು, ಮಾತನಾಡುವ ಅವಶ್ಯಕತೆ ಇಲ್ಲ” ಎಂದು ತಿಳಿಸಿದರು.
ಹೈಕಮಾಂಡ್ ಬಳಿ ಡಿಸಿಎಂ, ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಯಿತೇ ಎಂದು ಕೇಳಿದಾಗ “ಡಿಸಿಎಂ, ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಬಳಿ ಚರ್ಚೆಯಾಗಿಲ್ಲ.ದಯವಿಟ್ಟು ಈ ವಿಚಾರ ಇಲ್ಲಿಗೆ ಮುಗಿಸಿಬಿಡಿ” ಎಂದು ಹೇಳಿದರು.
Previous Articleಬೀದಿಗಿಳಿದ ಬಿಜೆಪಿ ಕಾರ್ಯಕರ್ತರು.
Next Article ಸ್ವಾಮೀಜಿಗಳಿಗೆ ಶಿವಕುಮಾರ್ ಕಿವಿಮಾತು.