ಬೆಂಗಳೂರು,ಸೆ.16:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ 248 ಮತಗಳ ಅಂತರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಶಾಸಕ ಕೆ ವೈ ನಂಜೆ ಗೌಡ ಅವರ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ.
ಮತಗಳ ಎಣಿಕೆಯ ಸಮಯದಲ್ಲಿ ಭಾರಿ ಪ್ರಮಾಣದಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿ ಇವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಂಜುನಾಥ್ ರಾಜ್ಯ ಹೈಕೋರ್ಟ್ ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್.ದೇವದಾಸ್ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ನಂಜೇಗೌಡ ಅವರ ಆಯ್ಕೆಯನ್ನು ಅಸಿಂಧುಗೊಳಿಸಿದೆ. ಅಷ್ಟೇ ಅಲ್ಲದೆ ನಾಲ್ಕು ವಾರಗಳೊಳಗೆ ಮತಗಳ ಮರು ಎಣಿಕೆಗೆ ಆದೇಶಿಸಿದೆ ಜೊತೆಗೆ ತಾನು ನೀಡಿರುವ ಅಸಿಂಧು ಆದೇಶ ಜಾರಿಗೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿದೆ.
ಅವಧಿಯಲ್ಲಿ ಶಾಸಕರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಬಹುದು. ಒಂದು ವೇಳೆ ಸುಪ್ರೀಂ ಕೋರ್ಟ್‌ನಿಂದ ಯಾವುದೇ ನಿರ್ದೇಶನ ಬರದೇ ಇದ್ದರೆ ಶಾಸಕ ಸ್ಥಾನ ಅಸಿಂಧುವಾಗುತ್ತದೆ ಹಾಗು ಮರು ಮತಎಣಿಕೆ ನಡೆಯಲಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ವೈ.ನಂಜೇಗೌಡ ಗೆಲುವು ಸಾಧಿಸಿದ್ದರು. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 15 ಮಂದಿ ಸ್ಪರ್ಧಿಗಳ ಏಜೆಂಟ್ಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಒಂದೇ ಕೊಠಡಿಯಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಬೇಕಿದ್ದು, ಎರಡು ಪ್ರತ್ಯೇಕ ಕೊಠಡಿಯಲ್ಲಿ ಎಣಿಕೆ ಮಾಡಲಾಗಿದೆ. ಆ ಮೂಲಕ ಜನಪ್ರತಿನಿಧಿಗಳ ಕಾಯ್ದೆಯ ನಿಯಮಗಳು ಮತ್ತು ಚುನಾವಣಾ ಆಯೋಗ ಪ್ರಕಟಿಸಿದ್ದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ, ನಂಜೇಗೌಡರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಚುನಾವಣಾ ಆಯೋಗದ ಕ್ರಮವನ್ನು ರದ್ದುಪಡಿಸಬೇಕು. ಅಷ್ಟೇ ಅಲ್ಲದೆ, ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ
ಅಭ್ಯರ್ಥಿಗಳು ಪಡೆದಿದ್ದ ಮತಗಳ ವಿವರ
ಕೆ.ವೈ, ನಂಜೇಗೌಡ ( ಕಾಂಗ್ರೆಸ್)- 50,955
ಮಂಜುನಾಥ್ ಗೌಡ( ಬಿಜೆಪಿ)- 50707
ಹೂಡಿ ವಿಜಯ್ ಕುಮಾರ್( ಪಕ್ಷೇತರ)- 49362
ಜಿ,ಇ ರಾಮೇಗೌಡ( ಜೆಡಿಎಸ್)- 17.627
ಗೆಲುವಿನ ಅಂತರ 248 ಇದೆ.
ಮೇಲ್ಮನವಿ:
ಇನ್ನು ಈ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಕೆ ವೈ ನಂಜೇಗೌಡ ಹೈಕೋರ್ಟ್ ತೀರ್ಪು ತಮಗೆ ತೀವ್ರ ಬೇಸರ ತಂದಿದೆ ನ್ಯಾಯಾಲಯದಲ್ಲಿ ತಮಗೆ ಜಯ ಸಿಗಬಹುದು ಎಂಬ ವಿಶ್ವಾಸವಿತ್ತು ಆದರೆ ಈಗ ನೀಡಿರುವ ತೀರ್ಪು ಬೇಸರ ಮೂಡಿಸಿದೆ ಎಂದು ಹೇಳಿದರು.
ಮತದಾನ ಪ್ರಕ್ರಿಯೆ ಮತ್ತು ಮತಗಳ ಹೇಳಿಕೆ ಸಂಪೂರ್ಣ ನ್ಯಾಯಯುತವಾಗಿ ನಡೆದಿದೆ ಜನರ ತೀರ್ಪಿನ ಮುಂದೆ ಪ್ರತಿಪಕ್ಷಗಳ ಪಿತೂರಿ ನಡೆಯಲಿಲ್ಲ ಹೀಗಾಗಿ ಅವರು ಕೋರ್ಟ್ ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಈಗ ನೀಡಿರುವ ತೀರ್ಪನ್ನು ಪ್ರಶ್ನಿಸಿ ತಾವು ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸುತ್ತಿದ್ದು ಅಲ್ಲಿ ಜಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Previous Articleಮೆಡಿಕಲ್ ಸೀಟಿಗಾಗಿ ಕಿವುಡರಾದರು.
Next Article ದಿನೇಶ್ ಗುಂಡೂರಾವ್ ಗೆ ಲೋಕಾಯುಕ್ತ ನೋಟಿಸ್.