ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಿಲುಕಿರುವ ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಮತ್ತು ಶಾಸಕರು ವಿಧಾನಸೌಧ ಮತ್ತು ಹೈಕೋರ್ಟ್ ಮುಂಭಾಗದಲ್ಲಿ 24 ತಾಸುಗಳ ಕಾಲ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.
ಸಿಎಂ ನಿವಾಸಕ್ಕೆ ಘೇರಾವ್ ಗೆ ಯತ್ನಿಸಿ, ಪೊಲೀಸರಿಂದ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಕಾಂಗ್ರೆಸ್ ನಾಯಕರು ವಿಧಾನಸೌಧದ ಮುಂದೆ ಪ್ರತಿಭಟನೆ ಆರಂಭಿಸಿದರು. ಈ ವೇಳೆ ತಮ್ಮ ಹೋರಾಟದ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ ಶಿವಕುಮಾರ್ ಈ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಕೊಂಡೋಯ್ಯುತ್ತೇವೆ ಎಂದು ಹೇಳಿದರು.
ಅಹೋರಾತ್ರಿ ಧರಣಿ ಹಿನ್ನೆಲೆಯಲ್ಲಿ ನಾಳೆಯಿಂದ ಆರಂಭವಾಗಬೇಕಿದ್ದ ಜಿಲ್ಲಾವಾರು ಪ್ರತಿಭಟನೆ ಒಂದು ದಿನ ಮುಂದೂಡಲಾಗಿದ್ದು, ಏಪ್ರಿಲ್ 16ರ ಶನಿವಾರದಿಂದ ಆರಂಭವಾಗಲಿದೆ ಎಂದು ತಿಳಿಸಿದರು.
‘ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿಯವರು ಈ ಭ್ರಷ್ಟಾಚಾರ ಮುಚ್ಚಿಹಾಕಲು ಹುನ್ನಾರ ಮಾಡುತ್ತಿದ್ದು,ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ’ ಎಂದರು.
ನಾವು 24 ಗಂಟೆಗಳ ಹಗಲು-ರಾತ್ರಿ ಧರಣಿ ಹಮ್ಮಿಕೊಂಡಿದ್ದು, ಶಾಸಕಾಂಗ ಹಾಗು ನ್ಯಾಯಾಂಗದ ಬಾಗಿಲಲ್ಲಿ ನಿಂತು ನ್ಯಾಯ ಕೇಳುತ್ತಿದ್ದೇವೆ. ನ್ಯಾಯ ಸಿಗಬೇಕು. ಈ ಸರ್ಕಾರ ಭ್ರಷ್ಟ ಸರ್ಕಾರ. ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ. ಅವನಿಂದಲೇ 40% ಕಮಿಷನ್ ಸುಲಿಗೆ ಮಾಡುತ್ತಿರುವಾಗ ಬೇರೆಯವರಿಂದ ಹೇಗೆ ಸುಲಿಗೆ ಮಾಡುತ್ತಿರಬಹುದು. ಸಂತೋಷ್ ಪಾಟೀಲ್ ಅವರ ಪತ್ನಿ ಹಾಗು ತಾಯಿ ನಮಗೆ ಎಲ್ಲ ವಿಚಾರ ತಿಳಿಸಿದ್ದಾರೆ. ಮಾಧ್ಯಮಗಳ ಮುಂದೆ ಸತ್ಯಾಂಶ ಬಿಚ್ಚಿಟ್ಟಿದ್ದಾರೆ. ಅವರ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ. ಅವರಿಗೆ ಕಪ್ಪು ಮಸಿ ಬಳಿಯಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಬಿಜೆಪಿ ಬೇಕಾದರೆ ಅವರಂತಹ ಮುತ್ತುರತ್ನಗಳನ್ನು ತಮ್ಮ ಕಚೇರಿಯಲ್ಲಿ ಇಟ್ಟುಕೊಳ್ಳಲಿ. ಇಂತಹ ಮುತ್ತುರತ್ನಗಳು ನಿಮ್ಮಲ್ಲಿದ್ದರೆನೇ ಒಳ್ಳೆಯದು. ಮಹಿಳೆಯರು ಮೂಗುತಿ ಹಾಗೂ ಓಲೆಯಲ್ಲಿ ಮುತ್ತುರತ್ನಗಳನ್ನು ಇಟ್ಟುಕೊಂಡಂತೆ ಬಿಜೆಪಿ ಲಂಚ ಹಾಗು ಮಂಚದವರನ್ನು ಪಕ್ಕದಲ್ಲಿ ಇಟ್ಟುಕೊಳ್ಳಲಿ ಎಂದು ಹೇಳಿದರು.