ಮೈಸೂರು,ಫೆ.11-ಕಿಡಿಗೇಡಿಯೊಬ್ಬ ಮಾಡಿದ ಅವಹೇಳನಕಾರಿ ಚಿತ್ರವುಳ್ಳ ಪೋಸ್ಟ್ ನಿಂದ
ಆಕ್ರೋಶಗೊಂಡ ಯುವಕರ ಗುಂಪು
ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆಸಿದ ಕಲ್ಲಿನ ದಾಳಿಯಿಂದ ಎಸಿಪಿ, ಇನ್‌ಸ್ಪೆಕ್ಟರ್ ಸೇರಿ 14 ಮಂದಿ ಪೊಲೀಸರು ಗಾಯಗೊಂಡು 10 ಕ್ಕೂ ಹೆಚ್ಚು ಪೊಲೀಸ್ ವಾಹನಗಳಿಗೆ ಹಾನಿಯಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಕಲ್ಲೇಟಿನಿಂದ ಗಾಯಗೊಂಡಿರುವಎಸಿಪಿ ಶಾಂತ ಮಲ್ಲಪ್ಪ, ನಜರಬಾದ್ ಇನ್ಸ್‌ಪೆಕ್ಟರ್ ಮಹದೇವಸ್ವಾಮಿ ಸೇರಿ 14 ಮಂದಿ ಪೊಲೀಸರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಸದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರಗಳನ್ನು ವಿವಸ್ತ್ರಗೊಳಿಸಿ, ತಲೆ ಮೇಲೆ ಮುಸ್ಲಿಂ ಸಮುದಾಯ ಬಳಸುವ ಟೊಪ್ಪಿ ಇಟ್ಟು, ದೇಹದ ಮೇಲೆಲ್ಲಾ ಉರ್ದು ಭಾಷೆಯ ಕೆಲ ಪದಗಳನ್ನು ಬರೆದು ಸಾರ್ವಜನಿಕವಾಗಿ ಹಂಚಿಕೆ ಮಾಡಿರುವುದೇ ಒಂದು ಸಮುದಾಯ ಉದ್ವಿಗ್ನಗೊಳ್ಳಲು ಕಾರಣವಾಗಿದೆ.
ಪೋಸ್ಟರ್ ಕುರಿತು ನಿನ್ನೆ ರಾತ್ರಿ ಮಾಹಿತಿ ತಿಳಿದ ಮುಸ್ಲಿಂ ಸಮುದಾಯದ ಸಾವಿರಾರು ಮಂದಿ ಏಕಕಾಲದಲ್ಲಿ ಉದಯಗಿರಿ ಮುಖ್ಯ ರಸ್ತೆ ತೆಡೆದು ಪ್ರತಿಭಟನೆಗೆ ಮುಂದಾದರು. ಈ ವೇಳೆ ಒಂದು ಗುಂಪು ಉದಯಗಿರಿ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿತಲ್ಲದೆ, ತಪ್ಪಿತಸ್ಥನನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೊಲೀಸರು ಕೂಡಲೇ ಹೆಚ್ಚುವರಿ ಪಡೆ ಕರೆಸಿಕೊಂಡು ಪರಿಸ್ಥಿತಿ ನಿಯಂತ್ರಿಸುವ ಕೆಲಸ ಮಾಡುವ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಕಂಡ ಪೊಲೀಸರು ಕೂಡಲೇ ಲಾಠಿ ಪ್ರಹಾರ ಮಾಡಿದರಲ್ಲದೆ, ಆಶ್ರುವಾಯು ಸಿಡಿಸಿ ಗುಂಪುಗೂಡಿದವರನ್ನು ಚದುರಿಸಿದರು.
ತದನಂತರ ಒಂದು ಸಮುದಾಯದ ಗುಂಪಿನ ಪ್ರಮುಖರು ತಮ್ಮ ಜನರನ್ನು ಸಂತೈಸುವ ನಿಟ್ಟಿನಲ್ಲಿ ಕೆಲಸ ಮಾಡಿದರಾದರೂ ಪ್ರತಿಭಟನೆ ಮತ್ತಷ್ಟು ತಾರಕಕ್ಕೇರಿತು. ಈ ವೇಳೆ ರಾಜ್ಯ ಮೀಸಲು ಪೊಲೀಸ್ ಪಡೆ ಹಾಗೂ ನಗರ ಸಶಸ್ತ್ರ ಮೀಸಲು ಪಡೆಯ ಹೆಚ್ಚುವರಿ ತುಕಡಿಗಳನ್ನು ಸ್ಥಳಕ್ಕೆ ಕರೆಸಿ ಆಕ್ರೋಶಭರಿತ ಗುಂಪನ್ನು ಚದುರಿಸಲಾಯಿತು.
ಕಿಡಿಗೇಡಿ ಬಂಧನ:
ಈ ನಡುವೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಲ್ಯಾಣಗಿರಿಯ ಸುರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕೃತ ಫೇಸ್‌ಬುಕ್‌ನಲ್ಲಿ ಮಾಹಿತಿಯನ್ನು ನಗರ ಪೊಲೀಸರು ಹಂಚಿಕೊಂಡಿದ್ದಾರೆ.
ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವುದರಿಂದ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸ್ ಇಲಾಖೆಯ ಹಿರಿಯ ಉನ್ನತಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಯುವಕರಿಗೆ ಶೋಧ:
ಪೋಸ್ಟ್ ವಿಚಾರಕ್ಕೆ ಗಲಾಟೆ ತೆಗೆದಿರುವ ಸ್ಥಳೀಯರು ದಾಂಧಲೆ ಸೃಷ್ಟಿಸಿದ್ದಾರೆ. ಪೊಲೀಸ್ ಠಾಣೆ ಹಾಗೂ ಪೊಲೀಸ್ ವಾಹನದ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟ ಮಾಡಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಉದಯಗಿರಿ ಠಾಣೆ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನ ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸಿ ದಾಂಧಲೆ ನಡೆಸಿದ ಯುವಕರನ್ನು ಮಾರ್ಕ್ ಮಾಡಿ ಬಂಧಿಸಲು ಮುಂದಾಗಿದ್ದಾರೆ.
Previous Articleಶಕ್ತಿ ಪ್ರದರ್ಶನಕ್ಕೆ ಮುಂದಾದ ದಲಿತ ಮಂತ್ರಿಗಳು
Next Article Infosys ಯಾಕೆ ಹೀಗೆ ಮಾಡಿದೆ.?