ಪ್ರಯಾಗ್ ರಾಜ್ :
ಕೋಟ್ಯಂತರ ಜನರ ಆಕರ್ಷಣೆ ಹಾಗೂ ಆರಾಧನೆಯ ಕೇಂದ್ರವಾಗಿರುವ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೂ ಲಕ್ಷಾಂತರ ಸಾಧು ಸಂತರು, ನಾಗಾ,ಬಾಬಾಗಳು, ಅಘೋರಿಗಳು ಬಂದು ಸೇರಿದ್ದಾರೆ.
ವಿವಿಧ ಅಖಾಡಗಳ ನೇತೃತ್ವದಲ್ಲಿ ಪವಿತ್ರ ಶಾಹಿ ಸ್ನಾನ, ಅಮೃತ ಸ್ನಾನವೂ ನೆರವೇರಿದೆ. ಈ ನಡುವೆ ಹಲವು ಅಖಾಡಗಳ ಸಾಧುಗಳು ಇಲ್ಲಿ ಬೀಡು ಬಿಟ್ಟಿದ್ದು, ಇನ್ನೂ ಒಂದು ತಿಂಗಳ ಕಾಲ ಇವರ ಆಚರಣೆ, ವ್ರತ, ಸ್ನಾನ ಎಲ್ಲ ನಡೆಯಲಿವೆ.
ಇವರೆಲ್ಲರ ನಡುವೆ ಒಂದು ವಿಶಿಷ್ಟ ಅಖಾಡ ಎದ್ದು ನಿಂತಿದೆ. 2016ರವರೆಗೂ ಈ ಅಖಾಡ ಅಸ್ತಿತ್ವದಲ್ಲಿ ಇರಲಿಲ್ಲ. ಈ ಅಖಾಡದ ವಿಶೇಷವೆಂದರೆ ಇಲ್ಲಿರುವರು ಪುರುಷರೂ ಅಲ್ಲಿ. ಸ್ತ್ರೀಯರೂ ಅಲ್ಲ. ಆದರೆ ಇವೆರಡೂ ಆಗಿರುವ ತೃತೀಯ ಲಿಂಗಿಯರದ್ದು.
ಇದರ ಹೆಸರು ʼಕಿನ್ನರ ಅಖಾಡʼ. ಇದಕ್ಕೆ ಕಿನ್ನರ ಎಂಬ ಹೆಸರೇಕೆ? ಎಂದು ಕೇಳುತ್ತೀರಾ.ಪುರಾಣದ ಮಹಾಭಾರತದಲ್ಲಿ ಈ ಕಿನ್ನರರ, ಕಿಂಪುರುಷರ ಉಲ್ಲೇಖ ಇದೆ. ಇವರು ದೇವತೆಗಳನ್ನು ಸಂತೋಷಪಡಿಸಲು ಇರುವವರು, ಇವರು ನಾನಾ ಕಲೆಗಳ ಸಂಗಮ. ಗಂಧರ್ವರಂತೆಯೇ ಇವರು ಕೂಡ ಹಾಡು ಕುಣಿತ ಸಂಗೀತ ನೃತ್ಯಗಳನ್ನು ಕರಗತಗೊಳಿಸಿಕೊಂಡವರು.
ಅಖಾಡಗಳೆಂದರೆ ಸಾಧು ಸನ್ಯಾಸಿಗಳ ಸಮೂಹ. ಸನ್ಯಾಸಿಗಳ ನಂಬಿಕೆ ಹಾಗೂ ಅವರು ಅನಸರಿಸುವ ಮಾರ್ಗದಿಂದ ಇವುಗಳನ್ನು ವಿಂಗಡಿಸಲಾಗಿರುತ್ತದೆ. ಹೀಗೆ ಒಟ್ಟು 13 ಅಖಾಡಗಳಾಗಿ ವಿಂಗಡಿಸಲಾಗಿದೆ. ಅವುಗಳ ಜೊತೆಗೆ 14ನೆಯದಾಗಿ ಕಿನ್ನರ ಸೇರಿದೆ. ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಅಖಾಡಗಳನ್ನು ರಚಿಸಲಾಯಿತು. ಜಗದ್ಗುರು ಆದಿ ಶಂಕರಾಚಾರ್ಯರು ಎಂಟನೇ ಶತಮಾನದಲ್ಲಿ ಅಖಾಡಗಳನ್ನು ಸ್ಥಾಪಿಸಿದರು ಎನ್ನಲಾಗುತ್ತದೆ. ಅಖಾಡಗಳಲ್ಲಿರುವವರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಆಧ್ಯಾತ್ಮಿಕ ಜಾಗೃತಿಯ ಜೊತೆಗೆ ಆಯುಧಗಳನ್ನು ಹೇಗೆ ಬಳಸಬೇಕೆಂದು ಅವರಿಗೆ ಕಲಿಸಲಾಗುತ್ತೆ. ಆಧ್ಯಾತ್ಮಿಕ ಮತ್ತು ರಕ್ಷಣಾತ್ಮಕ ಕೆಲಸಗಳೆರಡನ್ನೂ ಅಖಾಡದ ಸಾಧುಗಳು ನಿರ್ವಹಿಸುತ್ತಾರೆ.
ಅದೇ ರೀತಿಯಲ್ಲಿ ಕಿನ್ನರ ಅಖಾಡದಲ್ಲಿರುವ ತೃತೀಯ ಲಿಂಗಗಳು ಎನಿಸಿಕೊಂಡಿರುವ ಮಂಗಳಮುಖಿಯರು ಈ ಬಾರಿಯ ಕುಂಭಮೇಳದಲ್ಲಿ ದಾಖಲೆ ಪ್ರಮಾಣದಲ್ಲಿ ಪಾಲ್ಗೊಂಡಿದ್ದಾರೆ ಅವರೆಲ್ಲರೂ ಅತ್ಯಂತ ಶಿಸ್ತಿನಿಂದ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದು ಈ ಎಲ್ಲರ ಕುತೂಹಲದ ಕೇಂದ್ರವಾಗಿದ್ದಾರೆ.
Previous Articleಮಂತ್ರಿಗಳಿಗೆ ಗುತ್ತಿಗೆದಾರರ ಎಚ್ಚರಿಕೆ
Next Article ಭಾರತೀಯ ನೌಕಾಪಡೆ ಗೆ ಭೀಮ ಬಲ