ಬೆಂಗಳೂರು, ಜೂನ್ 18:
ರಾಜ್ಯ ಸರ್ಕಾರದ ಜನಪರ ಯೋಜನೆಗಳ ಅನುಷ್ಠಾನಕ್ಕೆ ಕೆಪಿಟಿಸಿಎಲ್ ನೌಕರರ ಸಂಘ ಬೆಂಬಲವಾಗಿದೆ, ನಮ್ಮ ಸರ್ಕಾರವೂ ಈ ಸಂಘದ ಪರವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಆಯೋಜಿಸಿದ್ದ,ವಜ್ರಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, “ಕೆಪಿಟಿಸಿಎಲ್ ನೌಕರರ ಸಂಘದ ಉತ್ಸಾಹ ಹಾಗೂ ಸ್ಪೂರ್ತಿ ನೋಡಿದರೆ ನಾವು ಮತ್ತಷ್ಟು ಜನಪರ ಯೋಜನೆಗಳನ್ನು ರೂಪಿಸಿದರೂ ಅದನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಾರೆ ಎಂಬ ವಿಶ್ವಾಸ ಬರುತ್ತದೆ,” ಎಂದರು.
ರಾಜ್ಯ ಸರ್ಕಾರ, ಇಂಧನ ಇಲಾಖೆ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿರುವ ನೌಕರರ ಪರವಾಗಿದೆ. ನೌಕರರ ಬೇಡಿಕೆಗಳನ್ನು ಆಡಳಿತ ಮಂಡಳಿ ಸಭೆಯ ಮುಂದೆ ಇಟ್ಟು ಸೂಕ್ತ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು”.
ನಮ್ಮ ಸರ್ಕಾರದ ಪ್ರಮುಖ ಗ್ಯಾರಂಟಿ ಘೋಷಣೆ ಗೃಹಜ್ಯೋತಿ. ಇಂದು 1.65 ಕೋಟಿ ಮನೆಗಳಿಗೆ ತಲುಪಿದೆ. ಇವರೆಲ್ಲರಿಗೂ ಜೀರೋ ಬಿಲ್ ವಿತರಿಸುತ್ತಿದ್ದೇವೆ. ಅದೇ ರೀತಿ ಕುಸುಮ್- ಸಿ ಯೋಜನೆಗೆ ರಾಜ್ಯ ಸರ್ಕಾರ ಶೇಕಡಾ 50 ರಷ್ಟು ಸಬ್ಸಿಡಿ ನೀಡುತ್ತಿದೆ, ಕೇಂದ್ರ ಶೇಕಡಾ 30 ರಷ್ಟು ಸಬ್ಸಿಡಿ ನೀಡುತ್ತಿದೆ. ಇದು ರೈತರಿಗೆ ಬಲತಂದಿದೆ. ರೈತರ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆ ವಿದ್ಯುತ್ ಒದಗಿಸುವ ಈ ಯೋಜನೆಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು.
ರೈತರಿಗೆ ಸಮರ್ಪಕ ವಿದ್ಯುತ್ ನೀಡಲು ಕೆಪಿಟಿಸಿಎಲ್ ವತಿಯಿಂದ ಹೆಚ್ಚುವರಿ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸುತ್ತಿದ್ದೇವೆ, ಇದು ರೈತರಿಗೆ ಶಕ್ತಿ ನೀಡಿದೆ ಎಂದು ಹೇಳಲು ಹೆಮ್ಮೆಪಡುತ್ತೇನೆ,” ಎಂದು ಹೇಳಿದರು.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಹೇಳಿದಂತೆ ಜೈ ಜವಾನ್ ಜೈ ಕಿಸಾನ್ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ರೈತರಿಗೆ ಹೆಚ್ಚಿನ ಯೋಜನೆ, ಸೌಲಭ್ಯ ಒದಗಿಸುತ್ತಿದೆ,” ಎಂದು ತಿಳಿಸಿದರು.
ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಮಂತ್ರಿಗಳೇ ನಮ್ಮ ಪವನ ವಿದ್ಯುತ್ ಯೋಜನೆಗಳಿಗೆ ‘ನಂಬರ್ ಒನ್’ ಸಾಧನೆ ಬಗ್ಗೆ ಪುರಸ್ಕಾರ ನೀಡಿದ್ದಾರೆ. ಈ ಹಿಂದೆ ಸೌರ ವಿದ್ಯುತ್ ಕ್ಷೇತ್ರದಲ್ಲಿ ಪಾವಗಡದಲ್ಲಿ ಸ್ಥಾಪಿಸಿದ್ದ ಸೌರ ಘಟಕ ದೇಶದಲ್ಲೇ ನಂಬರ್ ಒನ್ ಇತ್ತು. ಮತ್ತೆ ನಂಬರ್ ಒನ್ ನತ್ತ ಹೆಜ್ಜೆ ಇಡುತ್ತಿದ್ದೇವೆ. ನಾವೆಲ್ಲರೂ ಸೇರಿ ಮತ್ತಷ್ಟು ಶ್ರಮಿಸಿ ಸೌರ ವಿದ್ಯುತ್ ಕ್ಷೇತ್ರದಲ್ಲೂ ಕರ್ನಾಟಕ ಮೊದಲ ಸ್ಥಾನಕ್ಕೆ ಬರುವಂತೆ ಮಾಡಬೇಕಿದೆ,” ಎಂದು ತಿಳಿಸಿದರು.
Previous Articleಮದುವೆಯಾಗುವುದಾಗಿ ನಂಬಿಸಿ ಕುತ್ತಿಗೆ ಕೊಯ್ದ.
Next Article ಭದ್ರತಾ ಆಯೋಗ ಅಸ್ತಿತ್ವಕ್ಕೆ.