ಬೆಂಗಳೂರು,ಮೇ.11-ಸ್ಥಳ ನಿಯೋಜಿಸಿ ವರ್ಗಾವಣೆ ಮಾಡಿದ್ದರೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ 38 ಮಂದಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ( ಡಿಜಿ-ಐಜಿಪಿ)ರ ಕಚೇರಿಯಿಂದ ನೋಟೀಸ್ ನೀಡಲಾಗಿದೆ.
ನಿಯೋಜಿತ ಸ್ಥಳಕ್ಕೆ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಏಳು ದಿನಗಳೊಳಗೆ ಉತ್ತರ ನೀಡುವಂತೆ ನೋಟೀಸ್ ನಲ್ಲಿ ಖಡಕ್ ಎಚ್ಚರಿಕೆ ಕೊಡಲಾಗಿದೆ.
ಸಂಬಂಧಿಸಿದ ಘಟಕಾಧಿಕಾರಿಗಳು ನಿಮ್ಮನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದಾರೆ. ಆದರೂ ಸಹ ನೀವು ವರ್ಗಾವಣೆಗೊಂಡಿರುವ ಸ್ಥಳದಲ್ಲಿ ಇದುವರೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ಈ ಮೂಲಕ ಬೇಜವಾಬ್ದಾರಿ, ಉದ್ಧಟತನ ಹಾಗೂ ಕರ್ತವ್ಯ ನಿರ್ಲಕ್ಷ್ಯತೆ ತೋರಿದ್ದೀರಿ. ಹೀಗಾಗಿ ಕೂಡಲೇ ನೀವು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅಂತಿಮವಾಗಿ ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.
ಒಂದು ವೇಳೆ ನೀವು ಕರ್ತವ್ಯಕ್ಕೆ ವರದಿ ಮಾಡಕೊಳ್ಳದೇ ಇಲ್ಲವಾದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ನಿಮ್ಮಿಂದಾದ ತಪ್ಪಿನ ಬಗ್ಗೆ ವಿವರಣೆ ಸಲ್ಲಿಸಲು ಈ ಅವಕಾಶ ನೀಡಲಾಗಿದೆ. ಸೂಚನಾ ಪತ್ರ ತಲುಪಿದ 7 ದಿನದೊಳಗಾಗಿ ಸಮಜಾಯಿಷಿ ಸಲ್ಲಿಸತಕ್ಕದ್ದು ಎಂದು ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಲಾಗಿದೆ.