ಬೆಂಗಳೂರು,ಜು.25-
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಅನುದಾನ ಹಂಚಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಮುಂದುವರೆದಿರುವ ಸಂಘರ್ಷ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ನಡೆಯುವ ನೀಟ್ ,ಒಂದು ದೇಶ ಒಂದು ಚುನಾವಣೆಗೆ ವಿರೋದ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಸಮಯದಲ್ಲಿ ರಾಜ್ಯದ ಹಿತಾಸಕ್ತಿಗೆ ಯಾವುದೇ ರೀತಿಯ ಧಕ್ಕೆಯಾಗಬಾರದು ಎಂದು ಆಗ್ರಹಿಸುವ ನಿರ್ಣಯವನ್ನು ವಿಧಾನಮಂಡಲದ ಉಭಯಚರ ಸದನಗಳಲ್ಲಿ ಅಂಗೀಕರಿಸಲಾಗಿದೆ.
ಮುಡಾ ಹಗರಣದ ಕುರಿತು ಚರ್ಚೆಗೆ ಪಟ್ಟು ಹಿಡಿದು ವಿಧಾನಪರಿಷತ್ ನಲ್ಲಿ ಪ್ರತಿಪಕ್ಷ ಸದಸ್ಯರು ಧರಣಿ ನಡೆಸುತ್ತಿರುವ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೈದ್ಯಕೀಯ ಶಿಕ್ಷಣ ಪ್ರವೇಶದ ನೀಟ್ ಪರೀಕ್ಷಾ ವ್ಯವಸ್ಥೆ ರದ್ದು ಪಡಿಸಲು ಆಗ್ರಹಿಸುವ ನಿರ್ಣಯ ಮಂಡಿಸಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ದೇಶ ಒಂದು ಚುನಾವಣೆ ವಿರೋಧಿಸುವ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಸಮಯದಲ್ಲಿ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಬಾರದು ಎಂಬ ನಿರ್ಣಯವನ್ನು ಮಂಡಿಸಿದರು.
ಈ ವೇಳೆ ಮಾತನಾಡಿದ ಅವರು, ಈ ರೀತಿಯ ಚುನಾವಣಾ ವ್ಯವಸ್ಥೆಗೆ ನಮ್ಮ ವಿರೋಧವಿದೆ. ಒಂದು ದೇಶ, ಒಂದು ಚುನಾವಣೆ ಎನ್ನುವುದು ಪ್ರಜಾಪ್ರಭುತ್ವಕ್ಕೆ ಮಾರಕ.ಇದರಿಂದ ರಾಷ್ಟ್ರೀಯವಾಗಿ ಸಮಸ್ಯೆ ಆಗಲಿದೆ. ಸ್ಥಳೀಯವಾಗಿ ಹಲವು ತಾಂತ್ರಿಕ ಸಮಸ್ಯೆ ಆಗಲಿದೆ. ಇದನ್ನು ಅನುಷ್ಠಾನ ಮಾಡಬಾರದು ಅಂತ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಅಂತ ಸದಸ್ಯರಿಗೆ ಮನವಿ ಮಾಡಿದರು.
ಅದೇ ರೀತಿಯಲ್ಲಿ ನೀಟ್ ಪರೀಕ್ಷೆ ರಾಜ್ಯಗಳ ಸಾರ್ವಭೌಮತೆ ಧಕ್ಕೆ ತರುತ್ತಿದೆ.ಪರೀಕ್ಷೆ ವ್ಯವಸ್ಥೆ ಪಾರದರ್ಶಕವಾಗಿ ನಡೆಯುತ್ತಿಲ್ಲ.ಪ್ರಶ್ನೆ ಪತ್ರಿಕೆ ಬಹಿರಂಗದಂತಹ ಅಕ್ರಮದ ಮೂಲಕ ಪರೀಕ್ಷಾ ವ್ಯವಸ್ಥೆಯ ಪಾವಿತ್ರ್ಯ ಹಾಳಾಗಿದೆ.ಈಗಾಗಲೇ ತಮಿಳುನಾಡು ನೀಟ್ ವಿರೋಧಿಸಿ ನಿರ್ಣಯ ಅಂಗೀಕರಿಸಿದೆ ಇದೇ ರೀತಿ ಕರ್ನಾಟಕ ಕೂಡಾ ಮಾಡಬೇಕಿದೆ ಈ ಬಗ್ಗೆ ಎಲ್ಲಾ ಸದಸ್ಯರು ಬೆಳಕು ಚೆಲ್ಲಬೇಕು ಎಂದು ಕೋರಿದರು.
ಆದರೆ, ಮುಡಾ ಹಗರಣದ ಚರ್ಚೆಗೆ ಪಟ್ಟು ಹಿಡಿದು ಧರಣಿ ನಡೆಸುತ್ತಿದ್ದ ಪ್ರತಿಪಕ್ಷ ಸದಸ್ಯರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.ಅಂತಿಮವಾಗಿ ಸದನ ಧ್ವನಿಮತದ ಮೂಲಕ ಮೂರೂ ನಿರ್ಣಯ ಅಂಗೀಕರಿಸಿತು.
ವಿಧಾನಸಭೆಯಲ್ಲೂ ಅಂಗೀಕಾರ:
ಮುಡಾ ಹಗರಣದ ಬಗ್ಗೆ ಚರ್ಚೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ನಡೆಸುತ್ತಿರುವ ಅಹೋರಾತ್ರಿ ಧರಣಿಯ ನಡುವೆ, ಒಂದು ದೇಶ-ಒಂದು ಚುನಾವಣೆಯನ್ನು ವಿರೋಧಿಸುವ, ನೀಟ್ ಪರೀಕ್ಷೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಲು ಆಗ್ರಹಿಸುವ, ಲೋಕಸಭೆ ಹಾಗೂ ವಿಧಾನಸಭೆಗಳ ಕ್ಷೇತ್ರ ವಿಂಗಡಣೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡುವ ಮೂರು ಪ್ರಮುಖ ನಿರ್ಣಯಗಳು ಹಾಗೂ ಅರಣ್ಯ ವಾಸಿ ಅನುಸೂಚಿತ ಬುಡಕಟ್ಟುಗಳಿಗೆ ಅರಣ್ಯ ಸಂರಕ್ಷಣಾ ಕಾಯ್ದೆಯಿಂದ ವಿನಾಯಿತಿ ನೀಡಬೇಕೆಂದು ಒತ್ತಾಯಿಸುವ ನಾಲ್ಕನೇ ನಿರ್ಣಯವನ್ನು ಮಂಡಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ನಿರ್ಣಯ ಮಂಡಿಸಿ 2026ರಲ್ಲಿನ ಅಥವಾ ಅದರ ನಂತರ ನಡೆಸುವ ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣಾ ಪ್ರಕ್ರಿಯೆಯನ್ನು ನಡೆಸಬಾರದು.
ಜನಸಂಖ್ಯೆಯನ್ನು ಆಧರಿಸಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಸಂದರ್ಭದಲ್ಲಿ ಪ್ರತಿ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಮತ್ತು ಪ್ರತಿ ರಾಜ್ಯದ ವಿಧಾನಸಭೆಗೆ ನಿಗದಿಪಡಿಸಬೇಕಾದ ಸ್ಥಾನಗಳ ಒಟ್ಟು ಸಂಖ್ಯೆಯನ್ನು 1971ರ ಜನಗಣತಿಯನ್ನು ಆಧರಿಸಿ ನಿರ್ಧರಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಈ ಬಗ್ಗೆ ಎಲ್ಲರೂ ಶಾಂತಚಿತ್ತರಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು
ಆದರೆ ವಿರೋಧ ಪಕ್ಷದ ಸದಸ್ಯರು ಅದಕ್ಕೆ ಕಿವಿಗೊಡಲಿಲ್ಲ.
ಅಂತಿಮವಾಗಿ ವಿಧಾನಸಭಾಧ್ಯಕ್ಷರು ಯು.ಟಿ.ಖಾದರ್ ಅವರು, ಸರ್ವಾನುಮತದಿಂದ ಅಂಗೀಕಾರಗೊಂಡಿವೆ ಎಂದು ಪ್ರಕಟಿಸಿದರು
Previous Articleಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ.
Next Article ಗ್ರೇಟರ್ ಬೆಂಗಳೂರಿಗೆ ಸದನ ಸಮಿತಿ.

