ಮುಂಬಯಿ: ನಾಲ್ಕು ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ಈ ಬಾರಿ ಆಡಿರುವ 10 ಪಂದ್ಯಗಳಲ್ಲಿ ಶುಕ್ರವಾರವಷ್ಟೇ ತನ್ನ ಎರಡನೇ ಗೆಲುವನ್ನು ದಾಖಲಿಸಿದೆ, ಅದೂ ರೋಚಕವಾಗಿ! ಕೊನೆಯ ಓವರ್ ತನಕವೂ ಪಂದ್ಯವನ್ನು ಗುಜರಾತ್ ಟೈಟಾನ್ಸ್ ಸುಲಭವಾಗಿ ಗೆಲ್ಲುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಬಿಗುವಾದ ದಾಳಿ ಸಂಘಟಿಸಿದ ಡ್ಯಾನಿಯಲ್ ಸ್ಯಾಮ್ಸ್ ಕೇವಲ ಮೂರು ರನ್ ನೀಡಿ, ಮುಂಬೈಯನ್ನು ಗೆಲ್ಲಿಸಿದರು.
ಶುಕ್ರವಾರ ರಾತ್ರಿ ನಡೆದ ಟಾಟಾ ಐಪಿಎಲ್ ಪಂದ್ಯಾವಳಿಯ 51ನೇ ಪಂದ್ಯದಲ್ಲಿ ಮುಂಬೈ ತಂಡವು ಗುಜರಾತ್ ವಿರುದ್ಧ ಐದು ರನ್‌ಗಳ ಅಂತರದ ಗೆಲುವು ದಾಖಲಿಸಿದೆ.
ಟಾಸ್ ಗೆದ್ದ ಗುಜರಾತ್, ಫೀಲ್ಡಿಂಗ್ ಆಯ್ದುಕೊಂಡಿತು. ಟೂರ್ನಿಯಲ್ಲಿ ಕೇವಲ 3ನೇ ಬಾರಿ ಮುಂಬೈ ಆರಂಭಿಕರು ಅರ್ಧ ಶತಕದ ಜತೆಯಾಟವಾಡಿದರು. ಇಶಾನ್ ಕಿಶನ್ (45 ರನ್, 29 ಎಸೆತ, 5 ಬೌಂಡರಿ, 1 ಸಿಕ್ಸರ್), ನಾಯಕ ರೋಹಿತ್ ಶರ್ಮ (43 ರನ್, 28 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಟಿಮ್ ಡೇವಿಡ್ (ಕೇವಲ 21 ಎಸೆತಗಳಲ್ಲಿ 44 ರನ್, 2 ಬೌಂಡರಿ, 4 ಸಿಕ್ಸರ್) ಜವಾಬ್ದಾರಿಯುತ ಆಟದ ನೆರವಿನೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 177 ರನ್ ಕಲೆಹಾಕಿತು. ರಶೀದ್ ಖಾನ್ 24 ರನ್‌ಗೆ ಎರಡು ವಿಕೆಟ್ ಪಡೆದುದಲ್ಲದೆ, 4 ಕ್ಯಾಚ್ ತೆಗೆದುಕೊಂಡು ಮಿಂಚಿದರು.
ಉತ್ತರವಾಗಿ ಗುಜರಾತ್ ಆರಂಭಕಾರರಿಬ್ಬರೂ ಅರ್ಧ ಶತಕ ಬಾರಿಸಿದ್ದರಿಂದ ಗುಜರಾತ್ ಸುಲಭವಾಗಿ ಗೆಲ್ಲುತ್ತದೆ ಎಂದೇ ನಿರೀಕ್ಷಿಸಲಾಗಿತ್ತು, ವೃದ್ಧಿಮಾನ್ ಸಾಹಾ (55 ರನ್, 40 ಎಸೆತ, 6 ಬೌಂಡರಿ, 2 ಸಿಕ್ಸರ್), ಶುಭಮಾನ್ ಗಿಲ್ (52 ರನ್, 36 ಎಸೆತ, 6 ಬೌಂಡರಿ, 2 ಸಿಕ್ಸರ್) ಉತ್ತಮ ಅಡಿಪಾಯ ಹಾಕಿಕೊಟ್ಟರು. ನಾಯಕ ಹಾರ್ದಿಕ್ 14 ಎಸೆತಗಳಲ್ಲಿ 24 ರನ್ ಬಾರಿಸಿದರು. ಮುಂಬೈ ವೇಗಿ ಜಸ್‌ಪ್ರೀತ್ ಬುರ್ಮಾ 4 ಓವರ್‌ಗಳಲ್ಲಿ 48 ರನ್ ಬಿಟ್ಟುಕೊಟ್ಟರು. ಆದರೆ, ಹಾರ್ದಿಕ್ ಮತ್ತು ರಾಹುಲ್ ಟೆವಾಟಿಯಾ ರನೌಟ್ ಆಗಿದ್ದು ತಂಡಕ್ಕೆ ಮುಳುವಾಯಿತು. ಕೊನೆಯ ಓವರ್‌ನಲ್ಲಿ 9 ರನ್‌ಗಳು ಬೇಕಿದ್ದವು . ಆದರೆ, ಮಿಲ್ಲರ್ ಅವರಂತಹ ಬ್ಯಾಟ್ಸ್ ಮನ್ ಕ್ರೀಸ್‌ನಲ್ಲಿದ್ದರೂ ಅವುಗಳನ್ನು ಗಳಿಸಲು ಗುಜರಾತ್ ತಂಡಕ್ಕೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಗುಜರಾತ್ 5 ವಿಕೆಟ್‌ಗೆ 172 ರನ್‌ಗಳಿಗೆ ತೃಪ್ತಿ ಪಡಬೇಕಾಯಿತು. ಆದರೂ 11 ಪಂದ್ಯಗಳಿಂದ 16 ಅಂಕಗಳನ್ನು ಗಳಿಸಿರುವ ಅದು ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ದೃಢವಾಗಿ ಅಲಂಕರಿಸಿದೆ.
ಶನಿವಾರ ಎರಡು ಪಂದ್ಯಗಳು ನಡೆಯಲಿದ್ದು, ಮೊದಲಿಗೆ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾದರೆ, ಮತ್ತೊಂದರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಸೆಣಸಲಿವೆ.