ಕೊಪ್ಪಳ,ಮೇ.28-
ಕೊಪ್ಪಳ ತಾಲ್ಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ
ತಾಯಿ, ಮಗಳು ಹಾಗೂ ಮೊಮ್ಮಗ ಸೇರಿ ಒಂದೇ ಕುಟುಂಬದ ಮೂವರು ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಹೊಸಲಿಂಗಾಪುರ ಗ್ರಾಮದ ರಾಜೇಶ್ವರಿ (45), ವಸಂತಾ (22) ಹಾಗೂ ಸಾಯಿ (4) ಮೃತ ದುರ್ದೈವಿಗಳು .ಇದು ಸಹಜ ಸಾವಲ್ಲ, ಮೂವರನ್ನು ಹಂತಕರು ಕೊಲೆ ಮಾಡಿ ಪರಾರಿಯಾಗಿಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ತಾಯಿ ರಾಜೇಶ್ವರಿಗೆ ನಿನ್ನೆ ರಾತ್ರಿ ಮತ್ತೊಬ್ಬ ಮಗಳು ಹಲವಾರು ಬಾರಿ ಫೋನ್ ಮಾಡಿದ್ದಾರೆ. ಆದರೆ ಯಾರು ಫೋನ್ ರಿಸೀವ್ ಮಾಡಿರಲಿಲ್ಲ, ಹೀಗಾಗಿ ಅನುಮಾನಗೊಂಡು ಮುಂಜಾನೆ ಬಂದು ಪರಿಶೀಲನೆ ನಡೆಸಿದಾಗ ಮನೆಯ ಬಾಗಿಲು ತೆಗೆದಿರಲಿಲ್ಲ. ತಕ್ಷಣವೇ ಆಕೆ ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಒಳ ಹೋದಾಗ ಮೂವರೂ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಬೆಡ್ ರೂಮ್‌ನಲ್ಲಿ ಮಲಗಿದ್ದಲ್ಲೇ ಅಜ್ಜಿ ಮತ್ತು ಮೊಮ್ಮಗನ ಶವಗಳು ಪತ್ತೆಯಾದರೆ, ಮಗಳು ವಸಂತಾಳ ಶವ ಅಡುಗೆ ಮನೆಯಲ್ಲಿತ್ತು.
ವಸಂತಾಳಿಗೆ ಆಂಧ್ರಪ್ರದೇಶದ ನಂದ್ಯಾಲ ಗ್ರಾಮದ ವ್ಯಕ್ತಿ ಜತೆ ವಿವಾಹವಾಗಿತ್ತು. ಆದರೆ ಎರಡು ವರ್ಷದ ಹಿಂದೆ ಪತಿಯಿಂದ ದೂರವಾಗಿದ್ದ ವಸಂತಾ, ನಂತರ ಹೊಸಲಿಂಗಾಪುರ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.
ಹೊಸ ಲಿಂಗಾಪುರ ಬಳಿ ಬೊಂಬೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಅನ್ಯ ವ್ಯಕ್ತಿ ಜತೆ ವಸಂತಾ ಸಂಬಂಧ ಹೊಂದಿದ್ದರು ಎಂಬ ಆರೋಪವೂ ಇದೆ.
ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇತ್ತ ಅಡುಗೆ ಮನೆಯಲ್ಲಿ ಪಾತ್ರೆಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದು, ವಸಂತಾಳ ಮೂಗಿನ ರಕ್ತ ಬಂದಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ಪೊಲೀಸರಿಂದ ತನಿಖೆ ನಡೆಯುತ್ತಿದೆ.
Previous Articleಲೋಕಾಯುಕ್ತ ಪೋಲಿಸ್ ಮತ್ತಷ್ಟು Smart.
Next Article ಒಂದೂವರೆ ಸಾವಿರ ಕೋಟಿ ಮೌಲ್ಯದ ಅರಣ್ಯ ಒತ್ತುವರಿ ತೆರವು.

