ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್‍ಅನ್ನು ಕಡ್ಡಾಯವಾಗಿ ಓದಬೇಕೆಂಬ ಶಾಲಾ ಆಡಳಿತ ಮಂಡಳಿ ಮಾಡಿರುವ ನಿಯಮಗಳ ಹಿನ್ನೆಲೆಯಲ್ಲಿ
ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಪ್ರತಿಯೊಬ್ಬ ಬಿಇಒಗಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಸರ್ಕಾರದ ನೀತಿ-ನಿಯಮಗಳಿಗೆ ವಿರುದ್ಧವಾಗಿ ಪಠ್ಯಕ್ರಮಗಳಿದ್ದರೆ ಖಂಡಿತವಾಗಿಯೂ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೆಲವು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪ್ರವೇಶಾತಿ ವೇಳೆ ಬೈಬಲ್ ಓದಲು ಒಪ್ಪಿಗೆ ಇದೆಯೇ ಎಂದು ಕೇಳುತ್ತಾರೆ. ಒಪ್ಪಿಗೆ ಕೊಟ್ಟ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾತಿ ಕೊಡುತ್ತಾರೆ. ಇದು ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆ ಎಂದು ಹೇಳಿದರು.
ಟಿಪ್ಪು, ಹಿಜಾಬ್ ವಿಚಾರಕ್ಕೆ ಮಾತನಾಡುವ ಪ್ರತಿಪಕ್ಷಗಳು, ವಿಚಾರವಾದಿಗಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಬೈಬಲ್ ವಿಷಯದಲ್ಲಿ ಮೌನ ಯಾಕೆ ಎಂದು ಪ್ರಶ್ನಿಸಿದ ಅವರು, ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮಗಳನ್ನು ಬೋಧನೆ ಮಾಡಬಾರದು ಎಂದು ನಮ್ಮ ಕಾಯ್ದೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಆದರೂ ಈ ಶಾಲೆ ಮಕ್ಕಳಿಗೆ ಕಡ್ಡಾಯವಾಗಿ ಬೈಬಲ್ ಓದಲೇಬೇಕೆಂದು ಸೂಚನೆ ನೀಡಿರುವುದು ನಿಯಮಗಳಿಗೆ ವಿರುದ್ಧವಾಗಿದೆ. ಶಿಕ್ಷಣ ಇಲಾಖೆ ಮೂಲಕ ಅಧಿಕಾರಿಗಳು ನೋಟಿಸ್ ಜಾರಿ ಮಾಡುತ್ತಾರೆ. ಅವರು ನೀಡುವ ಉತ್ತರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನಾಗೇಶ್ ತಿಳಿಸಿದರು.
Previous Articleಇಂಟೆಲಿಜೆನ್ಸಿ ಲೆಕ್ಕ
Next Article ನನಗೆ ಮಾತ್ರ ಯಾಕೆ ನೋಟೀಸ್-ಪ್ರಿಯಾಂಕ್ ಖರ್ಗೆ