ಬೆಂಗಳೂರು, ಏ.25-ಗೂಡ್ಸ್ ವಾಹನದಲ್ಲಿ ಗಾಂಜಾ ಸಾಗಾಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಚಂದ್ರಾ ಲೇಔಟ್ ಪೊಲೀಸರು 81 ಕೆಜಿ 450 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಡಿಗೇಹಳ್ಳಿಯ ನದೀಂಪಾಷ(24)ಹಾಗು ಶಿವಾಜಿನಗರದ ಇನೇಶ್ವರ್ (25)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಕಳೆದ ಏ.22 ರಂದು ಚಂದ್ರಾ ಲೇಔಟ್ ನಲ್ಲಿ ಗೂಡ್ಸ್ ವಾಹನದಲ್ಲಿ ಮಾದಕವಸ್ತು ಗಾಂಜಾವನ್ನು ಅಕ್ರಮವಾಗಿ ಸಾಗಾಣಿಕೆ
ಮಾಡುತ್ತಿದ್ದ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಚಂದ್ರಾ ಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ಮನೋಜ್ ಹೋವಳೆ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ.
ಬಂಧಿತ ಆರೋಪಿಗಳಿಂದ 81 ಕೆಜಿ 450 ಗ್ರಾಂ ಗಾಂಜಾ ಹಾಗು ಕೃತ್ಯಕ್ಕೆ ಉಪಯೋಗಿಸಿದ್ದ ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಆರೋಪಿಗಳು ಬೇರೆ ಕಡೆಯಿಂದ ಗಾಂಜಾ ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು ನಗರದ ವಿವಿಧೆಡೆ ಲಗೇಜ್ ವಾಹನದಲ್ಲಿ ಸಂಚರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದರು.