ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ.40 ರಷ್ಟು ಕಮಿಷನ್ ಆರೋಪ ಮಾಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿಯ ಲಾಡ್ಜ್ನಲ್ಲಿ ತಂಗಿದ್ದ ಗುತ್ತಿಗೆದಾರ ಸಂತೋಷ ಪಾಟೀಲ ಕಳೆದ ರಾತ್ರಿ ನೇಣಿಗೆ ಶರಣಾಗಿದ್ದು, ಇದಕ್ಕೂ ಮುನ್ನ ವಾಟ್ಸಪ್ನಲ್ಲಿ ಸಂದೇಶವೊಂದನ್ನು ಕಳಿಸಿದ್ದಾರೆ. ಇದರಲ್ಲಿ ‘ನನ್ನ ಸಾವಿಗೆ ಸಚಿವ ಕೆ.ಎಸ್. ಈಶ್ವರಪ್ಪ ಕಾರಣ. ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ, ಮಗುವಿಗೆ ಸರ್ಕಾರ ಅಂದರೆ ಪ್ರಧಾನಿ ಹಾಗು ಮುಖ್ಯಮಂತ್ರಿಗಳು ಮತ್ತು ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ.ಎಸ್. ಯಡಿಯೂರಪ್ಪನವರು ಸಹಾಯಹಸ್ತ ನೀಡಬೇಕೆಂದು ಕೈಮುಗಿದು ಕೇಳಿಕೋಳುತೇನೆ. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು. ನನ್ನ ಜೊತೆ ಬಂದ ನನ್ನ ಗೆಳೆಯರಾದ ಸಂತೋಷ ಮತ್ತು ಪ್ರಶಾಂತಗೆ ನಾನು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕರೆದುಕೊಂಡ ಬಂದಿರುತ್ತೇನೆ ಅಷ್ಟೇ. ಅವರಿಗೂ ಮತ್ತು ನನ್ನ ಸಾವಿಗೂ ಯಾವುದೇ ಸಂಬಂಧ ಇರುವುದಿಲ್ಲ’ ಎಂದು ಹೇಳಿದ್ದಾರೆ.
ಈ ಸಂದೇಶ ಬರುತ್ತಿದ್ದಂತೆ ಬೆಳಗಾವಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆಗ ಸಂತೋಷ ಮೊಬೈಲ್ ಉಡುಪಿಯಲ್ಲಿ ಇರುವುದು ಪತ್ತೆಯಾಗಿತ್ತು. ತಕ್ಷಣವೇ ಉಡುಪಿ ಪೊಲೀಸರ ಗಮನಕ್ಕೆ ತರಲಾಗಿತ್ತು.
ಬೆಳಗಾವಿ ಪೊಲೀಸರ ಮಾಹಿತಿ ಆಧರಿಸಿ ಉಡುಪಿ ಟೌನ್ ಪೊಲೀಸರು ಲಾಡ್ಜ್ ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ವೇಳೆ ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದರು.
ಈ ಸುದ್ದಿ ಹೊರಬೀಳುತ್ತಿದ್ದಂತೆ ಸಚಿವ ಈಶ್ವರಪ್ಪ ವಿರುದ್ದ ಪ್ರಹಾರ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಎಐಸಿಸಿ ನಾಯಕ ಸುರ್ಜೇವಾಲ ತಕ್ಷಣವೇ ಈಶ್ವರಪ್ಪ ಅವರನ್ನು ಮಂತ್ರಿಮಂಡಲದಿಂದ ವಜಾಗೊಳಿಸಿ ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.