ರಾಯಚೂರು,ಜ.27-
ಕಲಿಯುಗದ ಕಾಮಧೇನು ನಂಬಿದವರ ಕೈ ಬಿಡದ ಗುರುರಾಯರ ತಪೋಭೂಮಿ ಮಂತ್ರಾಲಯಕ್ಕೆ ನಾಡಿನ ಮೂಲೆ ಮೂಲೆಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ.
ಗುರು ರಾಜಾ ರಾಘವೇಂದ್ರರ ಬೃಂದಾವನ ದರ್ಶನ ಮತ್ತು ಆರಾಧನೆಗೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಕ್ಕೆ ಮಂತ್ರಾಲಯ ದೇವಾಲಯ ಟ್ರಸ್ಟ್ ಸಾಕಷ್ಟು ವ್ಯವಸ್ಥೆ ಮಾಡಿದೆ.ಆದರೂ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ.
ಈ ಅಗತ್ಯವನ್ನು ಮನಗಂಡ ವಂಚಕರು ಇದೀಗ ಭಕ್ತರನ್ನು ಮೋಸದ ಬಲೆಗೆ ಕೆಡವುತ್ತಿದ್ದಾರೆ
ರಾಯರ ಸನ್ನಿಧಿ ಮಂತ್ರಾಲಯದಲ್ಲಿ ರೂಂ ಬುಕ್ಕಿಂಗ್, ಪ್ರಸಾದ, ವಿವಿಧ ಸೇವೆಗಳ ಸೌಲಭ್ಯ ಒದಗಿಸುವ ಹೆಸರಲ್ಲಿ ವಂಚಿಸುವ ಜಾಲ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಮಂತ್ರಾಲಯ ರಾಯರ ಮಠದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಭಕ್ತರು ಜಾಗೃತರಾಗಿರಲು ಸೂಚಿಸಿದೆ.
ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದು, ಭಕ್ತರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ಫೇಕ್ ಯುಪಿಐ ಐಡಿಗಳ ಮೂಲಕ ಹಣ ಹಾಕಿಸಿಕೊಂಡು ವಂಚಿಸಲಾಗುತ್ತಿದೆ. ವಂಚಕರ ಜಾಲದಿಂದ ಭಕ್ತರು ಹಣ ಕಳೆದುಕೊಳ್ಳುತ್ತಿದ್ದಾರೆ.
ವಂಚಕರ ಕರೆ, ಪೋಸ್ಟ್, ಮೆಸೇಜ್ ನಂಬಿ ನಕಲಿ ಯುಪಿಐ ಐಡಿಗಳಿಗೆ ಹಣ ಹಾಕದಂತೆ ಮಠ ಎಚ್ಚರಿಕೆ ನೀಡಿದೆ. ವಂಚಕರಿಂದ ಕರೆ, ಮೆಸೇಜ್ ಬಂದರೆ ಸೈಬರ್ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಕೊಠಡಿಗಳನ್ನು ಅಧಿಕೃತ ವೆಬ್‌ಸೈಟ್‌ನಿಂದ ಬುಕ್ ಮಾಡುವಂತೆ ತಿಳಿಸಿದೆ.
ಮಠದ ವ್ಯವಸ್ಥಾಪಕ ವೆಂಕಟೇಶ್ ಜೋಶಿ ವಂಚಕರ ಜಾಲದ ಬಗ್ಗೆ ಪ್ರಕಟಣೆ ಹೊರಡಿಸಿ ಭಕ್ತರು ಎಚ್ಚರಿಕೆಯಿಂದಿರಲು ತಿಳಿಸಿದ್ದಾರೆ.
Previous Articleಸಿಸೇರಿಯನ್ ಗೆ ಮುಗಿ ಬೀಳುತ್ತಿರುವ ಗರ್ಭಿಣಿಯರು
Next Article ಮಂತ್ರಿ ಭೈರತಿ ಸುರೇಶ್ ಗೂ ಇಡಿ ಉರುಳು