ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಹೊಣೆ ಹೊತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ
ಈ ಸಂಬಂಧ , ‘ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮವೇ ನಡೆದಿಲ್ಲ ಎಂದು ಗೃಹ ಸಚಿವರು ಪದೇ ಪದೇ ಹೇಳಿಕೆ ನೀಡಿದ್ದರು. ಈಗ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡು ಪರೀಕ್ಷೆಯನ್ನೇ ರದ್ದು ಮಾಡಿದ್ದಾರೆ. ಇನ್ನು ಯಾವ ನೈತಿಕತೆಯ ಆಧಾರದ ಮೇಲೆ ಗೃಹ ಸಚಿವರ ಹುದ್ದೆಯಲ್ಲಿ ಮುಂದುವರಿಯುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.
‘ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಕರ್ನಾಟಕ ಪೊಲೀಸ್ ಇಲಾಖೆಯ ಜಂಘಾಬಲವೇ ಕುಸಿಯುವಂತೆ ಮಾಡಿದ್ದೀರಿ. ನಿಮಗೆ ನೈತಿಕ ರಾಜಕೀಯ ಮೌಲ್ಯವೇ ಗೊತ್ತಿಲ್ಲದಿದ್ದರೆ ಪರವಾಗಿಲ್ಲ. ಗೃಹ ಸಚಿವಸ್ಥಾನಕ್ಕೆ ತನ್ನದೇ ಆದ ಘನತೆ, ಗೌರವಗಳಿವೆ. ಹೆಚ್ಚು ಮಾತಾಡದೆ ಈಶ್ವರಪ್ಪ ಮಾದರಿಯಲ್ಲಿ ‘ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ರಾಜ್ಯಪಾಲರಿಗೆ ರಾಜೀನಾಮೆ ನೀಡಿ ಕುರ್ಚಿ ಖಾಲಿ ಮಾಡಿ’ ಎಂದು ಒತ್ತಾಯಿಸಿದ್ದಾರೆ.
‘ಜ್ಞಾನೇಂದ್ರ ಅವರಿಗೆ ಎರಡು ನಾಲಿಗೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಹಗರಣವೇ ನಡೆದಿಲ್ಲ ಎಂದು ಗೃಹ ಸಚಿವರು ಎದೆತಟ್ಟಿ ಹೇಳಿದ್ದರು. ಈಗ, ‘ಪಿಎಸ್‌ಐ ನೇಮಕಾತಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ನೇಮಕಾತಿ ರದ್ದುಪಡಿಸಿ, ಮರು ಪರೀಕ್ಷೆ ನಡೆಸುತ್ತೇವೆ’ ಎಂದು ನಡುಬಗ್ಗಿಸಿ ಹೇಳಿಕೆ ನೀಡಿದ್ದಾರೆ. ಹಾವಿಗೆ ಇರುವಂತೆ ಹಾವಿನಪುರದವರಿಗೂ ಎರಡು ನಾಲಿಗೆ ಇದೆ ಎಂಬುದನ್ನು ಗೃಹ ಸಚಿವರು ಸಾಬೀತು ಮಾಡಿದ್ದಾರೆ’ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.