ಮುಂಬಯಿ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಟಾಟಾ ಐಪಿಎಲ್‌ನ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 8 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಪ್ಲೇಆಫ್ ಹಂತದಲ್ಲಿ ಆಡುವ ಕನಸನ್ನು ಜೀವಂತವಾಗಿ ಇರಿಸಿಕೊಂಡಿದೆ.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕ ಹಾರ್ದಿಕ್ ಪಾಂಡ್ಯಾ ಅವರ ಆಜೇಯ ಅರ್ಧ ಶತಕ (62 ರನ್, 47 ಎಸೆತ, 4 ಬೌಂಡರಿ, 3 ಸಿಕ್ಸರ್), ವೃದ್ಧಿಮಾನ್ ಸಾಹಾ (31 ರನ್, 22 ಎಸೆತ, 4 ಬೌಂಡರಿ, 1 ಸಿಕ್ಸರ್), ಡೇವಿಡ್ ಮಿಲ್ಲರ್ (34 ರನ್, 25 ಎಸೆತ, 3 ಸಿಕ್ಸರ್) ಹಾಗೂ ಕೊನೆ ಗಳಿಗೆಯಲ್ಲಿ ಅಬ್ಬರಿಸಿದ ರಶೀದ್ ಖಾನ್ (6 ಎಸೆತಗಳಲ್ಲಿ ಆಜೇಯ 19 ರನ್, 1 ಬೌಂಡರಿ, 2 ಸಿಕ್ಸರ್) ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.
ಈ ಮೊತ್ತ ಸವಾಲೇ ಅಲ್ಲ ಎನ್ನುವ ರೀತಿಯಲ್ಲಿ ಆಡಿದ ಆರ್‌ಸಿಬಿ ಆರಂಭಿಕರು ಶತಕದ ಜತೆಯಾಟವಾಡಿದರು. ಫಾರ್ಮ್ ಕಂಡುಕೊಂಡ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 73 ರನ್ ಸಿಡಿಸಿದರು. ಇದರಲ್ಲಿ 8 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ನಾಯಕ ಫಾಪ್ ಡುಪ್ಲೆಸಿಸ್ ತಾಳ್ಮೆಯ 44 ರನ್ (5 ಬೌಂಡರಿ) ಗಳಿಸಿದರು. ಈ ಇಬ್ಬರ ನಡುವೆ ಮೊದಲ ವಿಕೆಟ್‌ಗೆ 14.3 ಓವರ್‌ಗಳಲ್ಲಿ 115 ರನ್‌ಗಳು ಹರಿದುಬಂದವು. ಕ್ರೀಸ್‌ಗೆ ಬರುತ್ತಿದ್ದಂತೆಯೇ ಅಬ್ಬರಿಸಲು ಆರಂಭಿಸಿದ ಮ್ಯಾಕ್ಸ್ ವೆಲ್ ಕೇವಲ 18 ಎಸೆತಗಳಲ್ಲಿ ಆಜೇಯ 40 ರನ್ ದೋಚಿದರು. 5 ಬೌಂಡರಿ, 2 ಸಿಕ್ಸರ್‌ಗಳ ಸೊಗಸೂ ಈ ಆಟದಲ್ಲಿ ಸೇರಿತ್ತು. 18.4 ಓವರ್‌ಗಳಲ್ಲಿ 2 ವಿಕೆಟ್‌ಗೆ 170 ರನ್ ಗಳಿಸಿದ ಆರ್‌ಸಿಬಿ 8 ವಿಕೆಟ್‌ಗಳಿಂದ ಗೆದ್ದಿತು. 14 ಪಂದ್ಯಗಳಿಂದ ಅದೀಗ 16 ಅಂಕ ಗಳಿಸಿದೆ. ಆದರೆ, ನೆಟ್ ರನ್‌ರೇಟ್ ಡೆಲ್ಲಿಗಿಂತ ಕಡಿಮೆ ಇದೆ. ಮುಂದಿನ ಪಂದ್ಯದಲ್ಲಿ ಡೆಲ್ಲಿ ಗೆದ್ದರೆ ಆರ್‌ಸಿಬಿ ಹೊರಗೆ ಬೀಳುತ್ತದೆ. 14 ಪಂದ್ಯಗಳಿಂದ 20 ಅಂಕ ಗಳಿಸಿರುವ ಗುಜರಾತ್ ಅಗ್ರ ಸ್ಥಾನದಲ್ಲಿ ಸ್ಥಿರವಾಗಿದೆ.
ಶುಕ್ರವಾರದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎದುರಾಗಲಿವೆ. ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿ ಇದೆ. ಭಾನುವಾರ, ಪ್ಲೇಆಫ್ ದೃಷ್ಟಿಯಿಂದ ಯಾವುದೇ ಮಹತ್ವವಿಲ್ಲದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರತಿಷ್ಠೆಗಾಗಿ ಸೆಣಸಾಡಲಿವೆ.
Previous Articleನೋಡು ನೋಡುತ್ತಿದ್ದಂತೆ ಬಿದ್ದ ಪವನ್ ವಿದ್ಯುತ್ ಉತ್ಪಾದನೆ ಸ್ಥಾವರ
Next Article ಅಬಕಾರಿ ಇನ್ಸ್‌ಪೆಕ್ಟರ್ ACB ಬಲೆಗೆ