ಬೆಂಗಳೂರು: ಗೇಮಿಂಗ್ ಆ್ಯಪ್‌ಗಳ ಮೇಲೆ ದಾಳಿ ನಡೆಸಿ 527 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಬ್ಯಾಂಕ್ ಖಾತೆ, ಬಾಂಡ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳನ್ನು ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು, ಗುರ್ಗಾವ್‌ನಲ್ಲಿನ ಗೇಮಿಂಗ್ ಆ್ಯಪ್ ‘ವಿಂಜೋ’ಗೆ ಸಂಬಂಧಿಸಿದ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ಕೈಗೊಂಡಾಗ ಸುಮಾರು 505 ಕೋಟಿ ರೂ. ಮೌಲ್ಯದ ಬ್ಯಾಂಕ್ ಠೇವಣಿ, ಬಾಂಡ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳು ಪತ್ತೆಯಾಗಿವೆ.
ವಿಂಜೋ ಗೇಮ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಗ್ರಾಹಕರಿಗೆ ಮೋಸ ಮಾಡುತ್ತಿರುವುದು ತನಿಖೆಯಿಂದ ಗೊತ್ತಾಗಿದೆ. ಗೇಮಿಂಗ್ ಹೆಸರಲ್ಲಿ ಕಂಪನಿಯು ರಹಸ್ಯವಾಗಿ ಅಲ್ಗರಿದಮ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಬಳಸಿ ಗ್ರಾಹಕರನ್ನು ಸೋಲಿಸುತ್ತಿತ್ತು ಎಂಬ ಆಘಾತಕಾರಿ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಂಜೋ ಯುಎಸ್ ಇಂಕ್ ಎಂಬ ನಕಲಿ ಕಂಪನಿಯನ್ನು ಸೃಷ್ಟಿಸಿ, ಭಾರತದಿಂದ ಸುಮಾರು 55 ಮಿಲಿಯನ್ ಡಾಲರ್ (ಅಂದಾಜು 489.90 ಕೋಟಿ ರೂ.) ಹಣವನ್ನು ಅಮೆರಿಕ ಮತ್ತು ಸಿಂಗಾಪುರಕ್ಕೆ ಅಕ್ರಮವಾಗಿ ವರ್ಗಾಯಿಸಲಾಗಿದೆ. ಅಲ್ಲದೇ, ಕೇಂದ್ರ ಸರ್ಕಾರವು ರಿಯಲ್ ಮನಿ ಗೇಮ್ಸ್ ಅನ್ನು ನಿಷೇಧಿಸಿದ ನಂತರವೂ ಕಂಪನಿಯು ಗ್ರಾಹಕರಿಗೆ ಹಿಂತಿರುಗಿಸಬೇಕಾದ 43 ಕೋಟಿ ರೂ. ಹಣವನ್ನು ತಡೆ ಹಿಡಿದಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

