ಬೆಂಗಳೂರು,ಮಾ.8-
ತಾನು ಅಂದ ಎಂಬ ದೈಹಿಕ ನ್ಯೂನತೆಯನ್ನು ಬಳಸಿಕೊಂಡ ಐನಾತಿ ಆಸಾಮಿಯೊಬ್ಬ ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ನಿರತನಾಗಿರುವ ಘಟನೆ ಬೆಳಕಿಗೆ ಬಂದಿದೆ.
ದುಬೈನಿಂದ 3.44 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಅಂಧ ವ್ಯಕ್ತಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಗುಪ್ತಚರ ಇಲಾಖೆಯಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಳೆದ ಮಾ. 4 ರಂದು ಕಳ್ಳಸಾಗಾಣೆ ಪ್ರಕರಣ ಬಯಲಿಗೆಳೆದು ಆರೋಪಿಯನ್ನು ಬಂಧಿಸಿದ್ದು,ಶಂಕಿತನ ಗುರುತನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ದುಬೈನಿಂದ ಆಗಮಿಸಿದ ಅಂಧ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದಿದ್ದಾರೆ. ಶೋಧದ ಸಮಯದಲ್ಲಿ ಅಧಿಕಾರಿಗಳಿಗೆ, ಅಂಧ ವ್ಯಕ್ತಿಯ ಶರ್ಟ್ ಒಳಗೆ ಅಡಗಿಸಿಟ್ಟಿದ್ದ 3.995 ಕೆಜಿ ಚಿನ್ನ ಪತ್ತೆಯಾಗಿದೆ.
3,44,38,796 ರೂ. ಮೌಲ್ಯದ ಚಿನ್ನವನ್ನು ಶಂಕಿತನ ಅಂಗಿಯ ಒಳಗಡೆ ಮರೆಮಾಡಲಾಗಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಸಂಬಂಧಿತ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಂಧ ವ್ಯಕ್ತಿಯು ಒಬ್ಬನೇ ಈ ಕೃತ್ಯ ಎಸಗಿದ್ದಾನೆಯೇ ಅಥವಾ ಆತನ ಹಿಂದೆ ಬೇರೆಯವರ ಕೈವಾಡ ಇದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.