ಬೆಳಗಾವಿ,ಆ.23-ನಗರದ ಗಾಲ್ಫ್ ಮೈದಾನದಲ್ಲಿ ಕಾಣಿಸಿಕೊಂಡಿರುವ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಇಂದು ಮುಂದುವರಿದಿದೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದು, ಹೆಚ್ಚುವರಿಯಾಗಿ ಇಬ್ಬರು ಶೂಟರ್ಗಳೂ ಪಾಲ್ಗೊಂಡಿದ್ದಾರೆ.
ಚಿರತೆ ಸೆರೆ ಕಾರ್ಯಾಚರಣೆಗೆ ನೆರವಾಗಲು ಸಂಜೆ ವೇಳೆಗೆ ಸಕ್ರೆಬೈಲ್‌ನಿಂದ ಆನೆಗಳು ಬರುವ ಸಾಧ್ಯತೆಯಿದೆ. 250 ಎಕರೆ ಪ್ರದೇಶ ವಿಸ್ತೀರ್ಣದ ಗಾಲ್ಫ್ ಮೈದಾನದಿಂದ ಚಿರತೆ ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರಿದಿದೆ.
ನಿನ್ನೆ ಎರಡು ಬಾರಿ ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆ (ಕೂಂಬಿಂಗ್) ನಡೆಸಿದ್ದರು. ಆನೆಗಳು ಬಂದ ನಂತರ ಚಿರತೆಗಾಗಿ ಆನೆಗಳ ನೆರವಿನೊಂದಿಗೆ ಮತ್ತೊಮ್ಮೆ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಲಿದ್ದಾರೆ.
ಗಾಲ್ಫ್ ಮೈದಾನಕ್ಕೆ ಬಂದಿರುವ ಹಂದಿ ಹಿಡಿಯುವ ಯುವಕರು ತಮ್ಮೊಂದಿಗೆ ಸುಮಾರು 20 ನಾಯಿಗಳನ್ನು ಕರೆತಂದಿದ್ದಾರೆ. ನಾಯಿಗಳ ನೆರವಿನೊಂದಿಗೆ ಅವರೂ ಶೋಧ ಕಾರ್ಯಾಚರಣೆ ನಡೆಸಿದ್ದರು. ಗಾಲ್ಫ್ ಮೈದಾನದಲ್ಲಿ ಚಿರತೆ ಪತ್ತೆಯಾಗದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯದ 22 ಶಾಲೆಗಳಿಗೆ ರಜೆಯನ್ನು ಮುಂದುವರಿಸಲು ತಾಲ್ಲೂಕು ಆಡಳಿತ ನಿರ್ಧರಿಸಿದೆ.
ಗಾಲ್ಫ್ ಮೈದಾನಕ್ಕೆ ಶಾಸಕ ಅನಿಲ್ ಬೆನಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿ ಪಡೆದುಕೊಂಡರು. ನಿನ್ನೆಯೂ ಕಾರ್ಯಾಚರಣೆ ಮುಗಿಯುವವರೆಗೂ ಶಾಸಕರು ಸ್ಥಳದಲ್ಲಿಯೇ ಬಿಡುಬಿಟ್ಟಿದ್ದರು. ಕಾರ್ಯಾಚರಣೆ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲಿಸಿದರು.
ಚಿರತೆ ಪತ್ತೆಗಾಗಿ ಬೆಂಗಳೂರಿನಿಂದ ವಿಶೇಷ ತಂತ್ರಜ್ಞಾನದ ಡ್ರೋನ್ ತರಲಾಗಿದೆ. ಗಾಲ್ಫ್ ಮೈದಾನದ ಸಿಬ್ಬಂದಿ ಗಸ್ತು ತಿರುಗುತ್ತಿದ್ದು, ಇಂದು ಚಿರತೆ ಹಿಡಿಯಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
Previous Articleಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ
Next Article ತಮಾಷೆಗಾಗಿ ಪಾಕ್ ಧ್ವಜ ಹಾರಿಸಿದ ಟೆಕ್ಕಿಗಳು