ಬೆಂಗಳೂರು.
ಸದಾ ಒಂದಿಲ್ಲ ಒಂದು ವಿವಾದಗಳಿಂದ ಸುದ್ದಿಯಾಗುತ್ತಿರುವ ಹಿಂದುತ್ವ ಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.
ಚೈತ್ರಾ ಅವರ ಕಾರ್ಯವೈಖರಿಯ ಬಗ್ಗೆ ಈ ಬಾರಿ ಬೇರೆ ಯಾರೂ ಅಲ್ಲ. ಸ್ವತಃ ಅವರ ತಂದೆಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚೈತ್ರಾ ಕುಂದಾಪುರ ಅವರು ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳೆಯ ಜ್ಯೋತಿಷಿ ಶ್ರೀಕಾಂತ್ ಕಶ್ಯಪ್ ಅವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೆಲವೇ ಮಂದಿ ಆಹ್ವಾನಿತ ಗಣ್ಯರ ಸಮ್ಮುಖದಲ್ಲಿ ನಡೆದ ಈ ಮದುವೆಗೆ ಚೈತ್ರ ಕುಂದಾಪುರ ಅವರ ತಂದೆ ಸೇರಿದಂತೆ ಕೆಲವು ಪ್ರಮುಖರೇ ಗೈರು ಹಾಜರಾಗಿದ್ದರು ಇದೀಗ ಅವರ ತಂದೆ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಚೈತ್ರಾ ಕಾಲಿಟ್ಟಿದ್ದಾರೆ. ನೂತನ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ಅವರ ತಂದೆ ಗಂಭೀರವಾದ ಆರೋಪಗಳನ್ನು ಮಾಡಿರುವುದು ಸದ್ದು ಮಾಡಿದೆ.
ಮಾಧ್ಯಮಗಳ ಜತೆ ಮಾತನಾಡಿರುವ ಚೈತ್ರಾ ತಂದೆ ಬಾಲಕೃಷ್ಣ ನಾಯ್ಕ್, “ನನ್ನ ಮಗಳು ವಿವಾಹಕ್ಕೆ ನನಗೆ ಸರಿಯಾದ ಆಮಂತ್ರಣ ಕೊಟ್ಟಿಲ್ಲ. ಮಗಳ ಮದುವೆಯನ್ನು ನಾನು ಒಪ್ಪಲಾರೆ. ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಳರು” ಎಂದಿದ್ದಾರೆ.
ನನ್ನ ಪತ್ನಿ ಕೂಡ ಮಗಳ ಬೆಂಬಲಕ್ಕೆ ನಿಂತಿದ್ದಾಳೆ. ಇವರು ಹಣದ ಆಸೆಗೆ ನನ್ನನ್ನು ದೂರವಿಟ್ಟಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲಿ ಇವರು ಹಣ ಹಂಚಿಕೊಂಡಿದ್ದಾರೆ. ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ” ಎಂದಿದ್ದಾರೆ.
ಚೈತ್ರಾ ಮದುವೆ ಸಂದರ್ಭ ಆಕೆ ನನ್ನಲ್ಲಿ ಹಣ ಕೇಳಿದಳು. ನಾನು ಹೋಟೆಲ್ನಲ್ಲಿ ಕೆಲಸ ಮಾಡುವ ಸಾಮಾನ್ಯ ನೌಕರ. ಚೈತ್ರಾ ಮತ್ತು ಆಕೆಯ ತಾಯಿ ಹಣಕ್ಕಾಗಿ ನನ್ನನ್ನು ದೂರವಿಟ್ಟಿದ್ದಾರೆ. ಚೈತ್ರ ಪತಿ ನಮ್ಮ ಮನೆಯಲ್ಲಿ ಇದ್ದವನು. ಅವನು ಕೂಡ ಕಳ್ಳ. ಅವರಿಗೆ ಮಾನ ಮರ್ಯಾದೆ ಇಲ್ಲ. ಈಗ ನನ್ನ ಕುಟುಂಬದ ಮಾನ ಮರ್ಯಾದೆ ಕೂಡ ತೆಗೆದರು’ ಎಂದಿದ್ದಾರೆ.
