ಬೆಂಗಳೂರು,ಜೂ.17:
ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವನ್ನು ಸಮರ್ಥಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸಂಪನೂಲ ಕ್ರೂಢೀಕರಣಕ್ಕೆ ನಾವು ಪ್ರಯತ್ನ ಮಾಡಿದ್ದೇವೆ. ಜನರಿಗೆ ಹೊರೆಯಾಗುವಂತಹ ತೆರಿಗೆಗಳನ್ನು ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಬಸ್ ದರ ಏರಿಕೆಯಾಗಿ ತುಂಬಾ ವರ್ಷಗಳೇ ಆಗಿವೆ. ಸದ್ಯಕ್ಕೆ ಹೆಚ್ಚಳ ಮಾಡುವ ಸಾಧ್ಯತೆ ಇಲ್ಲ. ಆದರೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳುವ ಮೂಲಕ ಪ್ರಯಾಣದರದ ಏರಿಕೆಯ ಸುಳಿವು ನೀಡಿದರು.
ಕೇಂದ್ರ ಸರ್ಕಾರ ತೆರಿಗೆಯ ರಾಜ್ಯದ ಪಾಲನ್ನು ನ್ಯಾಯೋಚಿತವಾಗಿ ನೀಡಿದರೆ ನಮಗೆ ಪೆಟ್ರೋಲ್, ಡೀಸೆಲ್ ಮೇಲೆ ಮಾರಾಟ ತೆರಿಗೆಯನ್ನು ಹೆಚ್ಚಿಸುವ ಅಗತ್ಯವೇ ಬರುತ್ತಿರಲಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡುತ್ತಿದ್ದರೂ ಬಾಯಿ ಬಿಡದ ಬಿಜೆಪಿಯವರು, ಈಗ ರಾಜ್ಯ ಸರ್ಕಾರ ಸಂಪನೂಲ ಕ್ರೋಢಿಕರಣಕ್ಕಾಗಿ ಮಾರಾಟ ತೆರಿಗೆಯನ್ನು ಹೆಚ್ಚಿಸಿದಾಕ್ಷಣ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯವರು ಬಡವರ ಯೋಜನೆಗಳಿಗೆ ವಿರುದ್ಧವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜಿಎಸ್‌ಟಿ ನಂತರ ರಾಜ್ಯಕ್ಕೆ ತೆರಿಗೆ ಹೆಚ್ಚು ಮಾಡುವ ಸ್ವಾತಂತ್ರ್ಯ ಕಡಿಮೆಯಾಗಿದೆ. ಅಬಕಾರಿ, ಮೋಟಾರು ಟ್ಯಾಕ್ಸ್, ಸ್ಟಾಂಟ್ ಡ್ಯೂಟಿ, ಪೆಟ್ರೋಲ್, ಡಿಸೇಲ್ ಮೇಲೆ ಮಾತ್ರ ತೆರಿಗೆ ಪರಿಷ್ಕರಣೆಗೆ ಅವಕಾಶ ಉಳಿದಿದೆ. ಉಳಿದ ಎಲ್ಲಾ ಜಿಎಸ್‌ಟಿಯನ್ನು ಕೇಂದ್ರ ಸರ್ಕಾರವೇ ಸಂಗ್ರಹಿಸುತ್ತಿದೆ. ಅದರಲ್ಲಿ ರಾಜ್ಯಕ್ಕೆ ಕಡಿಮೆ ಪಾಲು ಕೊಡುತ್ತಿದೆ ಎಂದು ದೂರಿದರು.
14 ಮತ್ತು 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ 1.87 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ತೆರಿಗೆ ಪಾಲು ಹಾಗೂ ಕೇಂದ್ರದಿಂದ ಬರುವ ಅನುದಾನವೂ ಕಡಿಮೆಯಾಗಿದೆ. ಜಿಎಸ್‌ಟಿ ತೆರಿಗೆಯಲ್ಲಿ 5495 ಕೋಟಿ ಪಾಲು ಕಡಿಮೆಯಾಗಿದೆ, ಅದನ್ನು ಸರಿತೂಗಿಸಲು ವಿಶೇಷ ಅನುದಾನ ಕೊಡುತ್ತೇವೆ ಎಂದು 15ನೇ ಹಣಕಾಸು ಆಯೋಗ ಹೇಳಿತ್ತು, ಅದರ ಬಗ್ಗೆ ಮಾತನಾಡಲಿಲ್ಲ. ಬೆಂಗಳೂರಿನ ಕೆರೆಗಳು, ಫೆರಿಫರಲ್ ರಿಂಗ್ ರಸ್ತೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಲಾಗಿದ್ದ ಹಣ ಬಿಡುಗಡೆಯಾಗದಿದ್ದಾಗ ಬಿಜೆಪಿಯವರು ಮಾತನಾಡಲಿಲ್ಲ ಎಂದು ಟೀಕಿಸಿದರು.
ಕರ್ನಾಟಕ ಸರ್ಕಾರ ಪಾಪರ್ ಆಗಿದೆ ಎನ್ನುತ್ತಿದ್ದಾರೆ. ಪಾಪರ್ ಎಂದರೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ಗೆ ಅರ್ಥ ಗೊತ್ತಾ? ಯಾವುದಾದರೂ ವೇತನ ಅಥವಾ ಬಜೆಟ್‌ನಲ್ಲಿ ಹೇಳಿದ ಯೋಜನೆಗಳಿಗೆ ಹಣ ನಿಲ್ಲಿಸಿದ್ದೇವಾ? ಎಂದು ಮರು ಪ್ರಶ್ನಿಸಿದರು.
ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗ 2014 ಜೂನ್‌ನಲ್ಲಿ ಪೆಟ್ರೋಲ್ ಮೇಲೆ ಕೇಂದ್ರ ಅಬಕಾರಿ ಸುಂಕ 9.48 ರೂಪಾಯಿ ಇತ್ತು. ಅದು 2020 ಮೇ ವೇಳೆಗೆ 32.98 ರೂಪಾಯಿ ಆಗಿದೆ. 23.50 ರೂಪಾಯಿ ಹೆಚ್ಚಾಗಿದೆ. ಡೀಸೆಲ್ ಮೇಲೆ 3.56 ರೂ. ಕೇಂದ್ರ ಅಬಕಾರಿ ತೆರಿಗೆ 31.81 ರೂಪಾಯಿ ಆಗಿದೆ. 28.27 ರೂಪಾಯಿ ಹೆಚ್ಚಾಗಿದೆ. ಆಗ ಬಿಜೆಪಿಯವರು ಪ್ರತಿಭಟನೆ ಮಾಡಲಿಲ್ಲ. ಕೇಂದ್ರ ತೆರಿಗೆ ಹೆಚ್ಚಳದಿಂದ ಜನಸಾಮಾನ್ಯರಿಗೆ ಹೊರೆಯಾಗಲಿಲ್ಲವೇ?, ಬಡವರು, ರೈತರು ಹಾಗೂ ಸಾಮಾನ್ಯ ಜನರ ಪರವಾಗಿರುವ ಬಿಜೆಪಿಯವರು ಹಾಗೂ ಇತರರು ಕೇಂದ್ರ ತೆರಿಗೆಯನ್ನು ಏಕೆ ವಿರೋಧಿಸಲಿಲ್ಲ? ಎಂದು ಪ್ರಶ್ನಿಸಿದರು.
2014ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 113 ಡಾಲರ್ ಇತ್ತು. 2015ರಲ್ಲಿ 50 ಡಾಲರ್‌ಗೆ ಇಳಿಯಿತು. 2016ರಲ್ಲಿ ಅದಕ್ಕಿಂತ ಕಡಿಮೆಯಾಯಿತು. ಈಗ 82.35 ಡಾಲರ್ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಯಿತು. ಆದರೆ ದೇಶಿಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾಗಿದೆ. 410 ರೂ ಇದ್ದ ಅಡುಗೆ ಸಿಲಿಂಡರ್ ಬೆಲೆ 200 ರೂ ದರ ಇಳಿಸಿದ ಬಳಿಕವೂ 805.50 ಆಗಿದೆ ಎಂದರು.
ಬಡವರು ಮತ್ತು ಶ್ರೀಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿಯವರು ಯಾರ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ನಮಗೆ ಪಾಠ ಹೇಳುತ್ತಾರಾ ? ಬರ ಪರಿಹಾರ ತೆಗೆದುಕೊಳ್ಳಲು ಕೋರ್ಟ್‌ಗೆ ಹೋದ ಮೇಲೆ ನ್ಯಾಯಾಲಯದ ನಿರ್ದೇಶನದ ಮೇರೆಗೆ 3453 ರೂಪಾಯಿ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಂಪನೂಲ ಸಂಗ್ರಹಿಸಿ, ರಾಜ್ಯವನ್ನು ಅಭಿವೃದ್ಧಿ ಮಾಡುವುದೇ ನಮ ಉದ್ದೇಶ. ಕೇಂದ್ರ ಸರ್ಕಾರ ದೊಡ್ಡ ಅನ್ಯಾಯ ಮಾಡುತ್ತಿದೆ. ಬಿಜೆಪಿಯವರು ಒಂದು ದಿನವೂ ಚಕಾರ ಎತ್ತಲಿಲ್ಲ. ಆರು ತಿಂಗಳು ಬರಗಾಲಕ್ಕೆ ಹಣ ನೀಡದಿದ್ದರೂ ಮಾತನಾಡಲಿಲ್ಲ. ಈಗ ಬಿಜೆಪಿಗೆ ಬೇರೆ ವಿಚಾರಗಳಿಲ್ಲ. ಅದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆಶೋಕ್‌ಗೆ ದೇಶದ ಆರ್ಥಿಕತೆ ಗೊತ್ತಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಜನರಿಗೆ ದಂಗೆ ಏಳಿ ಎಂದು ಕರೆ ನೀಡಿದ್ದಾರೆ. ರಾಜ್ಯಕ್ಕೆ ಅನ್ಯಾಯವಾದಾಗ ಒಂದು ದಿನವೂ ಮಾತನಾಡಲಿಲ್ಲ. ಬಿಜೆಪಿ ಜೊತೆ ಮೈತ್ರಿ ಬಳಿಕವೂ ಮೌನಕ್ಕೆ ಶರಣಾಗಿದ್ದರು ಎಂದು ಕಿಡಿಕಾರಿದರು.