ಬೆಂಗಳೂರು,ಏ.11-
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಜಾತಿವಾರು ಜನಗಣತಿ ವರದಿಯನ್ನು ರಾಜ್ಯ ಸರ್ಕಾರ
ಒಪ್ಪಿಕೊಂಡಿದೆ.
ಕಾಂತರಾಜು ನೇತೃತ್ವದ ಆಯೋಗ ಸಿದ್ಧಪಡಿಸಿದ್ದ ವರದಿಯನ್ನು ಆನಂತರ ಸಮಗ್ರವಾಗಿ ಪರಿಶೀಲನೆ ನಡೆಸಿ ಲಭ್ಯವಿರುವ ದತ್ತಾಂಶಗಳ ಆಧಾರದಲ್ಲಿ ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.
ಈ ವರದಿಯನ್ನು ಇಂದು ನಡೆದ ಸಂಪುಟ ಸಭೆಯಲ್ಲಿ ಮಂಡಿಸಲು ಒಪ್ಪಿಗೆ ಸೂಚಿಸಲಾಯಿತು. ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಸಂಪುಟ ಸಭೆಯಲ್ಲಿ ಮಂಡಿಸಲಾಗಿರುವ ವರದಿಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು 17ರಂದು ವಿಶೇಷ ಸಂಪುಟ ಸಭೆ ಕರೆಯಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಈ ಹಿಂದೆ ಕಾಂತರಾಜು ನೇತೃತ್ವದ ಆಯೋಗ ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮಾಡಲು ತೀರ್ಮಾನಿಸಿತ್ತು ರಾಜ್ಯದ,ಒಟ್ಟು 6.35 ಕೋಟಿ ಜನರ ಸಮೀಕ್ಷೆ ಮಾಡಬೇಕೆಂದು ಗುರಿ ಹಾಕಿಕೊಳ್ಳಲಾಗಿತ್ತು. ಆನಂತರದಲ್ಲಿ 5.98 ಕೋಟಿ ಜನರನ್ನು ಒಳಗೊಂಡ 1.35 ಕೋಟಿ ಕುಟುಂಬಗಳು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಶೇ. 97.4 ಜನರ ಮಾಹಿತಿ ಇದೆ. 37 ಲಕ್ಷ ಜನಮಾತ್ರ ಸಮೀಕ್ಷೆಯಿಂದ ಹೊರಗಡೆ ಉಳಿದಿದ್ದಾರೆ ಎಂದು ವಿವರಿಸಿದರು
ಜಿಲ್ಲಾಧಿಕಾರಿಗಳು, ಆಯುಕ್ತರು, ಅಧಿಕಾರಿಗಳು, ಜಿ.ಪಂ ಸಿಇಒಗಳು, ಹಿಂದುಳಿದ ವರ್ಗದ ಅಧಿಕಾರಿಗಳು, ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು, ಶಿಕ್ಷಕರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. 54 ಮಾನದಂಡದಡಿ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆ ಮಾಡಲು ತಜ್ಞರ ತಂಡ ಇತ್ತು. ಈ ಸಮೀಕ್ಷೆಗೆ 192 ಕೋಟಿ ವೆಚ್ಚವಾಗಿದೆ ಎಂದರು.
ವರದಿಯ ಮುಖ್ಯಾಂಶಗಳ ಪ್ರತಿಯನ್ನು ಎಲ್ಲ ಸಚಿವರಿಗೂ ಕೊಡಲಾಗಿದೆ. ಇದೇ 17 ರ ವಿಶೇಷ ಸಂಪುಟ ಸಭೆಗೆ ಅಧ್ಯಯನ ಮಾಡಿಕೊಂಡು ಬರಬೇಕು ಎಂದು ಸೂಚಿಸಲಾಗಿದೆ. ಅಂದು ವಿಸ್ತೃತ ಚರ್ಚೆಯ ಬಳಿಕ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಎಂದು ತಿಳಿಸಿದರು.
Previous Articleಕಮೀಷನ್ ಆರೋಪ ತನಿಖೆಗೆ ಎಸ್.ಐ.ಟಿ.ರಚನೆ
Next Article ಪೋಸ್ಟರ್ ಅಂಟಿಸಿದವರಿಗೆ ಸಿಕ್ತು ನೋಡಿ