ಕೊಪ್ಪಳ,ಅ.6 :
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವ ಜಾತಿಯವರನ್ನು ತುಳಿಯುವ ಪ್ರಶ್ನೆಯಿಲ್ಲ. ಸಮಸಮಾಜವನ್ನು ಬಯಸದವರು ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇಲ್ಜಾತಿಗಳನ್ನು ತುಳಿಯಲು ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಕೇಂದ್ರ ಸಚಿವ ಸೋಮಣ್ಣ ಆರೋಪದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಡೆಸದಿದ್ದರೆ, ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ. ಈ ಸಮೀಕ್ಷೆಯಲ್ಲಿ ಯಾವ ಜಾತಿಯವರನ್ನು ತುಳಿಯುವ ಪ್ರಶ್ನೆಯಿಲ್ಲ. ಸಮಸಮಾಜ ನಿರ್ಮಾಣವನ್ನು ವಿರೋಧಿಸುವವರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು
ಈಗಾಗಲೇ 1.10 ಕೋಟಿ ಕುಟುಂಬಗಳ ಸಮೀಕ್ಷಾ ಕಾರ್ಯ ಮುಗಿದಿದ್ದು, ನಿನ್ನೆವರೆಗೆ ಶೇ.63 ರಷ್ಟು
ಸರ್ವೇ ಕಾರ್ಯ ಪ್ರಗತಿಯಾಗಿದೆ. ನಾಳೆ ಸಂಜೆವರೆಗೆ ಸಮೀಕ್ಷೆಯ ಪ್ರಗತಿಯನ್ನು ಪರಿಶೀಲಿಸಿ, ಸಮೀಕ್ಷೆ ಅವಧಿ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ ಅವರು, ಪ್ರಹ್ಲಾದ್ ಜೋಷಿಯವರು ಕೇಂದ್ರ ಸಚಿವರಾಗಿದ್ದಾರೆ. ಕೇಂದ್ರ ಸರ್ಕಾರ ನಡೆಸಲಿರುವ ಜಾತಿಗಣತಿಗೂ ವಿರೋಧ ವ್ಯಕ್ತಪಡಿಸುತ್ತಾರೆಯೇ ? ಎಂದು ಪ್ರಶ್ನಿಸಿದರು.
ಜನರು ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ತಿಳಿಸಿದಂತೆ, ಸಮೀಕ್ಷಾಗಾರರು ಧರ್ಮವನ್ನು ನಮೂದಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮದ ಕುರಿತು ಜನರ ನಿಲುವೇ ನನ್ನ ನಿಲುವು ಎಂದರು.
ಬಲ್ಡೋಟಾ ಕಾರ್ಖಾನೆ ಯೋಜನೆ ಕುರಿತಂತೆ ಕೊಪ್ಪಳದಲ್ಲಿ ಹೋರಾಟಗಳು ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಲ್ಡೋಟಾ ಕಾರ್ಖಾನೆಯ ವಿಚಾರ ನ್ಯಾಯಾಲಯದಲ್ಲಿ ವಿಲೇ ಇದ್ದು, ತೀರ್ಪಿನ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು .
ಎಂಎಸ್ ಪಿ ಎಲ್ ಸೇರಿದಂತೆ ವಿವಿಧ ಕೈಗಾರಿಕೆಗಳಿಂದ ಬರುವ ಧೂಳಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಇದನ್ನು ತಡೆಗಟ್ಟಲು ಸರ್ಕಾರದ ಕ್ರಮ ತೆಗೆದುಕೊಳ್ಳುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಕಾರ್ಖಾನೆಗಳಿಂದ ಬರುವ ಧೂಳನ್ನು ಪರೀಕ್ಷೆ ನಡೆಸಿ, ಧೂಳು ಬರದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
Previous Articleಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.
Next Article IAS ಅಧಿಕಾರಿ ಅಪಘಾತದಲ್ಲಿ ದುರ್ಮರಣ.

