ಬೆಂಗಳೂರು,ಜ.24:
ನಾಯಕತ್ವದ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಬೇಸರಗೊಂಡಿರುವ ಜೆಡಿಎಸ್ ನ 12ಕ್ಕೂ ಹೆಚ್ಚು ಶಾಸಕರು ಪಕ್ಷ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಕೇಂದ್ರ ಮಂತ್ರಿ ಕುಮಾರಸ್ವಾಮಿ ಕಿಡಿ ಕಿಡಿಯಾಗಿದ್ದಾರೆ
ಕಾಂಗ್ರೆಸ್‌ನವರು ಉತ್ತಮವಾಗಿ ಸರ್ಕಾರ ನಡೆಸಿ, ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲಿಗೆ ವಿರೋಧ ಪಕ್ಷಗಳನ್ನು ಅಸ್ಥಿರಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ಗುಡುಗಿದ್ದಾರೆ.
ಕುಮಾರಸ್ವಾಮಿ ಅವರ ಈ ಆರೋಪಗಳನ್ನು ಗಮನಿಸಿದಾಗ ಸದ್ಯದಲ್ಲಿಯೇ ಜೆಡಿಎಸ್ನ ಹಲವು ಶಾಸಕರು ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿಗಳು ಖಚಿತ ಎಂಬಂತೆ ಭಾಸವಾಗುತ್ತದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಒಳ್ಳೆಯ ಕೆಲಸಗಳನ್ನು ಮಾಡಲೆಂದು ಜನರು ಅವರಿಗೆ ಆಶೀರ್ವದಿಸಿದರು. ಆದರೆ, ಈ ಸರ್ಕಾರದವರು ಮಾಡುತ್ತಿರುವುದೇನು? ಆಡಳಿತದ ವಿಷಯದಲ್ಲಿ ರಾಜ್ಯಕ್ಕೆ ಇದ್ದ ಹೆಸರು ಸರ್ವನಾಶಕ್ಕೆ ಹೊರಟಿದ್ದಾರೆ’ ಎಂದು ಆರೋಪಿಸಿದರು.
‘ನಾವೆಲ್ಲರೂ ಒಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಲೇ ಇರುತ್ತಾರೆ. ಯಾರಿಗೋಸ್ಕರ ಒಂದಾಗಿದ್ದಾರೆ? ಅಧಿಕಾರಕ್ಕೆ ಮತ್ತು ಕುರ್ಚಿಗಾಗಿ ಮಾತ್ರವೇ ಒಂದಾಗುತ್ತಿದ್ದಾರೆ. ಕುರ್ಚಿ ಕೊಟ್ಟ ಜನರಿಗಾಗಿ ಏನು ಮಾಡುತ್ತಿದ್ದಾರೆ; ಏನು ಕೊಟ್ಟಿದ್ದಾರೆ?’ ಎಂದು ಪ್ರಶ್ರ್ನಿಸಿದರು.
ಫೈನಾನ್ಸ್ ಕಂಪನಿಗಳ ಹಾವಳಿ ಬಗ್ಗೆ ಒಂದು ತಿಂಗಳಿನಿಂದಲೂ ಚರ್ಚೆಯಾಗುತ್ತಿದೆ. ಅಲ್ಲಲ್ಲಿ ಬೇಸತ್ತ ಜನರು ಮನೆ- ಹಳ್ಳಿಗಳನ್ನೇ ಬಿಟ್ಟು ಹೋಗುತ್ತಿದ್ದಾರೆ. ಆದರೆ, ಇದರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವನ್ನು ಈ ಸರ್ಕಾರ ಮಾಡಲೇ ಇಲ್ಲ. ನೊಂದವರಿಗೆ ಮಾನಸಿಕ ಸ್ಥೈರ್ಯವನ್ನೂ ತುಂಬಲಿಲ್ಲ. ಫೈನಾನ್ಸ್‌ಗಳು ಪರವಾನಗಿ ಇಲ್ಲದೇ ಅಣಬೆ ರೀತಿ ಹುಟ್ಟಿಕೊಂಡಿವೆ. ಕಿರುಕುಳದಿಂದ ಹಲವರು ಪ್ರಾಣ ಕಳೆದುಕೊಂಡ ಮೇಲೆ, ಊರು ಬಿಟ್ಟ ಹೋದ ಮೇಲೆ ಸಭೆ ನಡೆಸಿ ಚರ್ಚಿಸಿದರೇನು ಪ್ರಯೋಜನ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಣಂತಿಯರು ಸಾಯುತ್ತಿದ್ದರೂ, ಕಳಪೆ ಔಷಧಿ ಪೂರೈಕೆ ಆಗುತ್ತಿದ್ದರೂ ಈ ಸರ್ಕಾರದಲ್ಲಿ ಕೇವಲ ಕುರ್ಚಿಗಾಗಿ ಚರ್ಚೆಯಾಗುತ್ತಿದೆ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೀರಾ ಎನ್ನುವುದು ಮುಖ್ಯವಲ್ಲ. ಜನರಿಗೆ ಏನು ಮಾಡಿದಿರಿ ಎಂಬುದು ಮುಖ್ಯ. ಇನ್ನೂ ಐದು ವರ್ಷ ನೀವೇ ಅಧಿಕಾರದಲ್ಲಿರಿ; ಮುಂದೆಯೂ ನೀವೇ ಬನ್ನಿ. ಆದರೆ, ಜನರ ಮೇಲಿನ ಸಾಲದ ಹೊರೆಯನ್ನು ಕಡಿಮೆ ಮಾಡಿ. ಬಡವರನ್ನು ಆರ್ಥಿಕವಾಗಿ ಬೆಳೆಸುತ್ತೇವೆ ಎನ್ನುತ್ತೀರಲ್ಲಾ, ಇದೇನಾ ಅದು?’ ಎಂದು ಕೇಳಿದರು.
Previous Articleದಾಸನಿಗೆ ಮತ್ತೆ ಎದುರಾಯ್ತು ಸಂಕಷ್ಟ.
Next Article ಬಿಜೆಪಿಯಲ್ಲಿ ತೀವ್ರಗೊಂಡ ಬಣ ಬಡಿದಾಟ