ಬೆಂಗಳೂರು,ಆ.21-
ರಾಜ್ಯದ ಜೈಲುಗಳಲ್ಲಿ ಗನ್, ಗಾಂಜಾ ಮತ್ತು ಬುಲೆಟ್ ಪೂರೈಕೆ ಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ.
ಕಾರಾಗೃಹಗಳಲ್ಲಿ ಗನ್, ಗಾಂಜಾ ಮತ್ತು ಬುಲೆಟ್ ಪೂರೈಕೆಯಾಗುತ್ತಿದೆ ಮತ್ತು ಹಣ ವಸೂಲಾತಿಗೆ ಜೈಲು ಅಧಿಕಾರಿಗಳೇ ಕೈದಿಗಳಿಗೆ ಸುಪಾರಿ ನೀಡುತ್ತಿದ್ದಾರೆಂದು ವಕೀಲರೊಬ್ಬರು ಹೈಕೋರ್ಟ್ ಪೀಠದ ಮುಂದೆ ಮಾಡಿದ ಗಂಭೀರ ಆರೋಪವನ್ನು ಅಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅಚ್ಚರಿ ವ್ಯಕ್ತಪಡಿಸಿ,ಈ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಮೌಖಿಕ ಸೂಚನೆ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬರಿಗೆ ಮನೆ ಊಟ ಪೂರೈಸಲು ಅನುಮತಿ ನೀಡುವಂತೆ ಜೈಲು ಅಧೀಕ್ಷಕರಿಗೆ ನಿರ್ದೇಶನ ನೀಡಬೇಕು ಎಂದು ಕೈದಿಯ ಸಂಬಂಧಿಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯ ವಿಚಾರಣೆ ವೇಳೆ ಜೈಲಿನಲ್ಲಿ ಕೈದಿಗಳಿಗೆ ಮನೆ ಊಟ ಸರಬರಾಜು ಮಾಡಲು ಅನುಮತಿ ಇಲ್ಲ.ಆದರೆ ನಿಷೇಧಿತ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ನಿಷೇಧಿತ ವಸ್ತುಗಳು ಅಂದರೆ ಯಾವುವು? ಎಂದು ಪ್ರಶ್ನಿಸಿತು.ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು ಖೈದಿಯೊಬ್ಬರ ಪತ್ನಿ ಜೈಲುಗಳಲ್ಲಿ ಮೊಬೈಲ್, ಗಾಂಜಾ, ಗನ್ ಮತ್ತು ಬುಲೆಟ್ ಅನ್ನು ಜೈಲಿನ ಒಳಗಡೆಗೆ ಜೈಲು ಅಧಿಕಾರಿಗಳೇ ಪೂರೈಸುತ್ತಿದ್ದಾರೆ ಎಂದು ಕಾರಾಗೃಹ ಡಿಜಿಪಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ ಎಂದು ಗಮನ ಸೆಳೆದರು.
ಇದಕ್ಕೆ ಆಘಾತ ವ್ಯಕ್ತಪಡಿಸಿದ ನ್ಯಾಯಪೀಠ ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
Previous Articleಬ್ರಹ್ಮರ್ಷಿ ನಾರಾಯಣ ಗುರುಗಳು..
Next Article ರಾಜ್ಯಪಾಲರಿಗೆ ಬುಲೆಟ್ ಪ್ರೂಫ್ ಕಾರು.