ಸರ್ಕಾರವನ್ನೇ ಮುಜುಗರಕ್ಕೆ ಸಿಲುಕಿಸುವಂತಹ ಹೇಳಿಕೆಗಳನ್ನು ನೀಡಿ ಪದೇ ಪದೇ ಎಡವಟ್ಟು ಮಾಡಿಕೊಳ್ಳುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಖಾತೆ ಬದಲಿಸಬೇಕೆಂಬ ಚರ್ಚೆ ಬಿಜೆಪಿಯಲ್ಲಿ ಆರಂಭವಾಗಿದೆ.
ಜ್ಞಾನೇಂದ್ರ ಅವರು ಗೃಹ ಸಚಿವರ ಹುದ್ದೆಯ ಸೂಕ್ಷ್ಮತೆ ಮರೆತು ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ಆರೋಪ ಅವರು ಸಂಪುಟ ಸೇರಿದ ದಿನದಿಂದಲೂ ಇದೆ. ಇದೇ ಕಾರಣಕ್ಕಾಗಿ ಅವರನ್ನು ಸಂಪುಟದಿಂದ ಕೈಬಿಡಬೇಕು ಅಥವ ಖಾತೆ ಬದಲಿಸಬೇಕು ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಹಲವು ಬಾರಿ ಆಗ್ರಹಿಸಿದ್ದವು.
ಜಗಜೀವನರಾಂ ನಗರದಲ್ಲಿ ಚಂದ್ರಶೇಖರ್ ಎಂಬ ಯುವಕನ ಕೊಲೆಗೆ ಸಂಬಂಧಿಸಿದಂತೆ ಮತೀಯ ಸಂಘರ್ಷದ ಬಣ್ಣ ನೀಡುವ ರೀತಿಯಲ್ಲಿ ಗೃಹ ಸಚಿವರೇ ಹೇಳಿಕೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದೆ. ಆರಗ ಖಾತೆ ಬದಲಾವಣೆ ಕುರಿತು ಈಗ ಬಿಜೆಪಿಯಲ್ಲೇ ಚರ್ಚೆ ಜೋರಾಗಿದೆ.
ಜ್ಞಾನೇಂದ್ರ ಗೃಹ ಸಚಿವರಾದ ಕೆಲವೇ ದಿನಗಳಲ್ಲಿ ಮೈಸೂರಿನಲ್ಲಿ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ‘ಕತ್ತಲೆ ಸಮಯದಲ್ಲಿ ಸಂತ್ರಸ್ತ ಯುವತಿ ಅಲ್ಲಿಗೇಕೆ ಹೋಗಬೇಕಿತ್ತು? ಈಗ ಕಾಂಗ್ರೆಸ್‌ನವರು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ತೀವ್ರ ಟೀಕೆ ವ್ಯಕ್ತವಾದ ಬಳಿಕ ಹೇಳಿಕೆ ಹಿಂಪಡೆದು, ಕ್ಷಮೆ ಯಾಚಿಸಿದ್ದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ದನಗಳವು ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಗೃಹ ಸಚಿವರನ್ನು ಭೇಟಿಮಾಡಿ ದೂರು ನೀಡಿದ್ದರು. ಆ ಸ್ಥಳದಿಂದಲೇ ಪೊಲೀಸ್ ಅಧಿಕಾರಿಗೆ ಕರೆಮಾಡಿದ್ದ ಗೃಹ ಸಚಿವರು, ‘ನೀವು ಪೊಲೀಸರು ಲಂಚ ತಿನ್ನುವ ನಾಯಿಗಳು…’ ಎಂದು ಬೈದಿದ್ದರು.
ಜಗಜೀವನರಾಂ ನಗರದಲ್ಲಿ ಸೋಮವಾರ ತಡರಾತ್ರಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದ ಬಳಿಕ ನಡೆದ ಗಲಾಟೆಯಲ್ಲಿ ಚಂದ್ರಶೇಖರ್ ಕೊಲೆಯಾಗಿತ್ತು. ‘ಉರ್ದು ಭಾಷೆಯಲ್ಲಿ ಮಾತನಾಡಿಲ್ಲ ಎಂಬ ಕಾರಣಕ್ಕೆ ಚಂದ್ರಶೇಖರ್ ಅವರನ್ನು ಚುಚ್ಚಿ, ಚುಚ್ಚಿ ಕೊಲೆ ಮಾಡಲಾಗಿದೆ’ ಎಂದು ಜ್ಞಾನೇಂದ್ರ ಹೇಳಿಕೆ ನೀಡಿದ್ದರು. ನಂತರ ಹೇಳಿಕೆ ವಾಪಸ್ ಪಡೆದು, ‘ಬೈಕ್ ಡಿಕ್ಕಿ ನಂತರದ ಗಲಾಟೆಯೇ ಕೊಲೆಗೆ ಕಾರಣ’ ಎಂದು ಸಮಜಾಯಿಷಿ ನೀಡಿದ್ದರು.