ಶಿಕ್ಷಣ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವೋಂದನ್ನು ಘೋಷಿಸಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಲವು ವರ್ಷಗಳ ಕಾಲ ಕಂಡ ಕನಸು ಇದರೊಂದಿಗೆ ನನಸಾಗ ತೊಡಗಿದೆ
ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ಖಾಸಗಿ ಉದ್ಯಮ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ ನೆರವಿನಲ್ಲಿ ಅಭಿವೃದ್ಧಿ ಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ಶಿಕ್ಷಣ ಇಲಾಖೆ ರೂಪಿಸಿರುವ ಈ ಯೋಜನೆಯ ಹೆಸರು“ಸಮತ್ವ’.
ಸರ್ಕಾರಿ ಶಾಲೆಯಲ್ಲಿ ಕಲಿತು ಉನ್ನತ ಸ್ಥಾನಕ್ಕೆ ಏರಿರುವ ಡಿಕೆ ಶಿವಕುಮಾರ್ ಅವರು ನಗರ ಪ್ರದೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ತಮ್ಮ ಖಾಸಗಿ ಸಂಸ್ಥೆಯ ಮಾದರಿಯಲ್ಲೇ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಇರಬೇಕು ಎಂಬ ಕನಸು ಕಾಣುತ್ತಿದ್ದಾರೆ ಇದಕ್ಕಾಗಿ ಅವರು ತಮ್ಮ ಸ್ವಗ್ರಾಮ ದೊಡ್ಡ ಆಲನಹಳ್ಳಿಯಲ್ಲಿ ಸರ್ಕಾರಿ ಶಾಲೆಯನ್ನು ತಮ್ಮ ಉದ್ಯಮದ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿ ಅಭಿವೃದ್ಧಿಪಡಿಸಿದ್ದಾರೆ ಈ ಶಾಲೆ ರಾಜ್ಯದಲ್ಲಿ ಮಾದರಿ ಶಾಲೆ ಎಂಬ ಖ್ಯಾತಿ ಪಡೆದುಕೊಂಡಿದೆ.
ತಮ್ಮ ಉದ್ಯಮ ಸಂಸ್ಥೆ ಮಾಡಿದ ರೀತಿಯಲ್ಲೇ ರಾಜ್ಯದ ಇತರೆ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಬಳಸಿಕೊಂಡು ರಾಜ್ಯದ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಕನಸು ಕಂಡಿದ್ದಾರೆ.
ತಾವು ಉಪಮುಖ್ಯಮಂತ್ರಿಯಾದ ನಂತರ ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಿದರು. ಖಾಸಗಿ ಉದ್ಯಮ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ತಮ್ಮ ಉದ್ದೇಶವನ್ನು ವಿವರಿಸಿದರು. ತಮ್ಮ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಏನಿದೆ ಯಾವುದೋ ಉದ್ದೇಶಕ್ಕೆ ಬಳಕೆಯಾಗುವ ಬದಲಿಗೆ ಶಿಕ್ಷಣದ ಪ್ರಗತಿಗೆ ಬಳಕೆಯಾಗುವುದು ಉತ್ತಮ ಎಂದು ಭಾವಿಸಿದ ಉದ್ಯಮಪತಿಗಳು ಉಪಮುಖ್ಯಮಂತ್ರಿಗಳ ಚಿಂತನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದರು ಪರಿಣಾಮವಾಗಿ ರೂಪಗೊಂಡ ಯೋಜನೆಯೇ ಸಮತ್ವ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಲಹೆ ಸೂಚನೆ ಮತ್ತು ನಿರ್ದೇಶನದೊಂದಿಗೆ
ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಈ ಯೋಜನೆ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳ ಸುಧಾರಣೆಯ ನಿಟ್ಟಿನಲ್ಲಿ ಒಂದು ರಚನಾತ್ಮಕ ಹೆಜ್ಜೆಯಾಗಿದೆ. ಹಾಗೆಂದು ಸಿಎಸ್‌ಆರ್ ನಿಧಿಯನ್ನು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸುವುದು ಹೊಸ ಉಪಕ್ರಮವೇನಲ್ಲವಾದರೂ ಈ ಬಾರಿ ಸಿಎಸ್‌ಆರ್ ನಿಧಿಯನ್ನು ಶಾಲೆಗಳ ಅಭಿವೃದ್ಧಿಗೆ ಪೂರ್ಣ ಪ್ರಮಾಣದಲ್ಲಿ ಬಳಸಲು ಮುಂದಾಗಿರುವುದು ಸ್ವಾಗತಾರ್ಹ.
ಇತ್ತೀಚಿನ ದಶಕಗಳಲ್ಲಿ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿನ ಸರಕಾರಿ ಶಾಲೆಗಳಿಗೆ ಹೆಚ್ಚಿನ ಮೂಲಸೌಕರ್ಯಗಳು ಲಭಿಸುತ್ತಿದ್ದು, ಶಿಕ್ಷಕರಾದಿಯಾಗಿ ಸಿಬ್ಬಂದಿಯೂ ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಈ ಶಾಲೆಗಳು ಕೂಡ ಉತ್ತಮ ಫಲಿತಾಂಶ ಪಡೆಯುತ್ತಿವೆ. ಸಹಜವಾಗಿಯೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಈ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಸಾವಿರಾರು ಶಾಲೆಗಳಲ್ಲಿ ವಿದ್ಯಾರ್ಥಿಗಳ ಅಭಾವ ತಲೆದೋರಿದೆ.
ಇದೇ ಕಾರಣಕ್ಕಾಗಿ ಈಗಾಗಲೇ ನೂರಾರು ಸಂಖ್ಯೆಯಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚಲಾಗಿದ್ದರೆ, ಭಾರೀ ಸಂಖ್ಯೆಯ ಶಾಲೆಗಳು ಕನಿಷ್ಠ ಮೂಲಸೌಕರ್ಯಗಳನ್ನೂ ಹೊಂದಿರದೆ ಸೊರಗಿವೆ. ಗ್ರಾಮೀಣ ಪ್ರದೇಶಗಳಲ್ಲಿನ ಇನ್ನಷ್ಟು ಸರಕಾರಿ ಶಾಲೆಗಳು ಬಾಗಿಲು ಹಾಕುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಾಸಗಿ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಂಡು ಶಿಕ್ಷಣ ಇಲಾಖೆಯ ಮೂಲಕ ಗ್ರಾಮೀಣ ಭಾಗದ ಶಾಲೆಗಳ ಪುನಶ್ಚೇತನಕ್ಕೆ ಮುಂದಾಗಿದ್ದಾರೆ.
ಖಾಸಗಿಯವರ ಸಹಭಾಗಿತ್ವದಲ್ಲಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸರಕಾರಿ ಶಾಲೆಗಳ ದತ್ತು, ಆರ್ಥಿಕ ನೆರವು ಸಹಿತ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಸರಕಾರ ರೂಪಿಸಿ ಅನುಷ್ಠಾನಗೊಳಿಸಿದ್ದು, ಭಾಗಶಃ ಯಶಸ್ಸನ್ನೂ ಕಂಡಿವೆ.
ಇದರಿಂದ ಪ್ರೇರಿತವಾಗಿ ಡಿಕೆ ಶಿವಕುಮಾರ್ ಅವರು ಶಿಕ್ಷಣ ಇಲಾಖೆಯ ಮೂಲಕ ಸಮತ್ವ ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದ್ದು, ಈ ಯೋಜನೆಯಡಿ ಕಂಪೆನಿಗಳು ಅಥವಾ ಉದ್ಯಮಿಗಳು ಅಪೇಕ್ಷಿಸುವ ಶಾಲೆಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಈ ಮೂಲಕ ನಿಧಿಯನ್ನು ಒದಗಿಸುವ ಉದ್ಯಮಿಗಳು ಶಾಲಾಭಿವೃದ್ಧಿಯಲ್ಲಿ ಹೆಚ್ಚಿನ ಆಸ್ಥೆ ವಹಿಸಲು ಮತ್ತು ಶಾಲೆಯನ್ನು ಸುವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲು ಉತ್ತೇಜನ ಲಭಿಸಲಿದೆ. ಅಲ್ಲದೆ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಕಂಪೆನಿಗಳು ಮತ್ತು ಉದ್ಯಮಿಗಳಿಗೆ ಪ್ರೇರಣೆ ಲಭಿಸಲಿದ್ದು, ಮುಂಬರುವ ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಸರಕಾರಿ ಶಾಲೆಗಳಿಗೆ ಕಾಯಕಲ್ಪ ಲಭಿಸುವ ನಿರೀಕ್ಷೆಯನ್ನು ಮೂಡಿಸಿದೆ.
Previous Articleಬೀದಿಗಿಳಿದ ಬಿಜೆಪಿ ನಾಯಕರು.
Next Article ರಾಜ್ಯಪಾಲರನ್ನು ಒತ್ತಡಕ್ಕೆ ಸಿಲುಕಿಸಿದ ಸರ್ಕಾರ