ಮುಂಬಯಿ: ಕೊರೊನಾ ಹಾವಳಿಗೆ ಸಿಲುಕಿದ ಡೆಲ್ಲಿ ಕ್ಯಾಪಿಟಲ್ಸ್ ಆಡುವುದೇ ಅನುಮಾನವಾಗಿದ್ದ ಪಂದ್ಯವನ್ನು ಅನಾಯಾಸವಾಗಿ ಗೆದ್ದುಬಿಟ್ಟಿತು.
ತಂಡದ ಫಿಸಿಯೋ, ಸಹಾಯಕ ಸಿಬ್ಬಂದಿ, ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಮಾರ್ಶ್ ಕೊರೊನಾಗೆ ತುತ್ತಾಗಿದ್ದರು. ಇದರಿಂದ ಪುಣೆಯಲ್ಲಿ ನಡೆಯಬೇಕಾಗಿದ್ದ ಪಂದ್ಯವನ್ನು ಡೆಲ್ಲಿ ತಂಡಕ್ಕೆ ಮುಂಬಯಿಯಲ್ಲೇ ಉಳಿಯಲು ಹೇಳಿ ಸ್ಥಳಾಂತರಿಸಲಾಗಿತ್ತು. ತಂಡದ ಎಲ್ಲರಿಗೂ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿದಾಗ ನ್ಯೂಜಿಲ್ಯಾಂಡ್ ವಿಕೆಟ್ ಕೀಪರ್ ಟಿಮ್ ಸೀಫರ್ಟ್ ಅವರಿಗೂ ಕೋವಿಡ್ ಇರುವುದು ಖಚಿತವಾದಾಗ ಆತಂಕ ಮನೆ ಮಾಡಿತ್ತು. ಆದರೆ, ಪಂದ್ಯವು ನಡೆಯಿತು.
[video_embed name=”video-1″]
ಟಾಸ್ ಸೋತು ಬ್ಯಾಟ್ ಮಾಡಲಿಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಡೆಲ್ಲಿಯ ಸ್ಪಿನ್ ಮತ್ತು ವೇಗದ ದಾಳಿಗೆ ತತ್ತರಿಸಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಜಿತೇಶ್ ಶರ್ಮಾ (32), ನಾಯಕ ಮಯಾಂಕ್ ಅಗರ್ವಾಲ್ (24) ಮಾತ್ರ ಕೊಂಚ ಪ್ರತಿರೋಧ ತೋರಿದರು. 20 ಓವರ್‌ಗಳಲ್ಲಿ ಪಂಜಾಬ್ 115 ರನ್‌ಗಳಿಗೆ ಸರ್ವಪತನ ಕಂಡಿತು. ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಖಲೀಲ್ ಅಹ್ಮದ್ ತಲಾ ಎರಡು ವಿಕೆಟ್ ಕಿತ್ತರು. ಮುಸ್ತಾಫಿಜುರ್ ರೆಹ್ಮಾನ್ ಒಂದು ವಿಕೆಟ್ ಪಡೆದರು.
ಉತ್ತರವಾಗಿ ಡೆಲ್ಲಿ ಪೃಥ್ವಿ ಶಾ (41 ರನ್, 20 ಎಸೆತ, 7 ಬೌಂಡರಿ, 1 ಸಿಕ್ಸರ್) ಅವರ ವಿಕೆಟ್ ಮಾತ್ರ ಕಳೆದುಕೊಂಡು ಕೇವಲ 10.3 ಓವರ್‌ಗಳಲ್ಲಿ ಗುರಿ ಮುಟ್ಟಿ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ವಾರ್ನರ್ ಟೂರ್ನಿಯ ಮೂರನೇ ಅರ್ಧ ಶತಕ ಸಿಡಿಸಿ (60 ರನ್, 30 ಎಸೆತ, 10 ಬೌಂಡರಿ, 1 ಸಿಕ್ಸರ್) ಆಜೇಯರಾಗಿ ಉಳಿದರು. ಸರ್ಫರಾಜ್ ಖಾನ್ ಆಜೇಯ 12 ರನ್ ಗಳಿಸಿದರು. ಕುಲದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ದಿಟ್ಟ ನಿರ್ಧಾರಗಳ ಜತೆಗೆ ಎರಡು ಕ್ಯಾಚ್, ಒಂದು ಸ್ಟಂಪಿಂಗ್ ಹಾಗೂ ಒಂದು ರನೌಟ್ ಮೂಲಕ ಡೆಲ್ಲಿ ನಾಯಕ ರಿಷಭ್ ಪಂಚ್ ಮಿಂಚು ಹರಿಸಿದರಲ್ಲದೆ, ಅಂಕ ಪಟ್ಟಿಯಲ್ಲಿ ತಂಡವನ್ನು 6ನೇ ಸ್ಥಾನಕ್ಕೇರಿಸಿದರು.