ಬೆಂಗಳೂರು, ಮೇ.25-ಡ್ರಾಪ್ ಕೊಡಲು ಸ್ಕೂಟರ್ ನಿಲ್ಲಿಸಿದ ಸವಾರನ ಮೇಲೆ ಕೈ ಅಡ್ಡ ಹಾಕಿದ ಕಿರಾತಕನೊಬ್ಬ ಹಲ್ಲೆ ಮಾಡಿರುವ ಘಟನೆ ಹೊರಮಾವು ಬಳಿಯ ವಿಜಯ ಬ್ಯಾಂಕ್ ಕಾಲನಿ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಮೇ 18ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಡೆದಿರುವ ಈ ಕೃತ್ಯವು ಸಿಸಿ ಟಿವಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.
ದುಷ್ಕರ್ಮಿಯೊಬ್ಬ ಕತ್ತಿಯಿಂದ ಹಲ್ಲೆ ಮಾಡಿ ಮೊಬೈಲ್ ಹಾಗು ಸ್ಕೂಟರ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಬೈಕ್ ಗೆ ಪೆಟ್ರೋಲ್ ತುಂಬಿಸಲು ಸಹಾಯ ಬೇಕು ಎಂದು ಸ್ಕೂಟರ್ ಗೆ ಕಿರಾತಕ ಕೈ ಅಡ್ಡ ಹಾಕಿದ್ದ. ಬಳಿಕ ಬೈಕ್ ನಿಲ್ಲಿಸುತ್ತಿದ್ದಂತೆ ಕತ್ತಿ ತೆಗೆದು ಹಲ್ಲೆ ಮಾಡಿದ್ದಾನೆ. ಎರಡ್ಮೂರು ಬಾರಿ ಕತ್ತಿಯಿಂದ ಕಿರಾತಕ ಹಲ್ಲೆ ಮಾಡಿದ್ದಾನೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ತರುಣ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ತರುಣ್, ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತರುಣ್ ಬಳಿ ಇದ್ದ ಎರಡು ಮೊಬೈಲ್ ಹಾಗು ಹೊಂಡಾ ಆಕ್ಟಿವಾ ಸ್ಕೂಟರ್ ನ್ನು ಖದೀಮ ಕಸಿದುಕೊಂಡು ಹೋಗಿದ್ದಾನೆ. ಇದೇ ವ್ಯಕ್ತಿ ಮತ್ತೊಂದು ರಸ್ತೆಯಲ್ಲಿ ಬೈಕ್ ಕೂಡ ಕದ್ದಿದ್ದಾನೆ. ಆ ದೃಶ್ಯವು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿರುವ ರಾಮಮೂರ್ತಿ ನಗರ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ