ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಮಾಜಿ ಕಪ್ತಾನ ವಿರಾಟ್ ಕೊಹ್ಲಿಯವರ (Virat Kohli) ಬೆಂಗಳೂರು ಪ್ರೀತಿಯ ಬಗ್ಗೆ ಹೇಳಬೇಕಾಗಿಲ್ಲ. ಈ ಬಗ್ಗೆ ಅವರೇ ಮಾತನಾಡುತ್ತಾ ತಮ್ಮ ನೆಚ್ಚಿನ ನಗರಿಯ ಬಗ್ಗೆ ಹಲವು ಬಾರಿ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಇದೀಗ ಆರ್ಸಿಬಿ ತಂಡ ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ವಿರಾಟ್ ಬೆಂಗಳೂರಿನಲ್ಲಿ ಏಕಾಂಗಿಯಾಗಿ ಅಡ್ಡಾಡಿದ ಬಗ್ಗೆ ಅಚ್ಚರಿಯ ವಿಚಾರಗಳನ್ನು ಹೊರಹಾಕಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಜನರ ರಿಯಾಕ್ಷನ್ ಏನಿತ್ತು ಎನ್ನುವುದನ್ನೂ ತಿಳಿಸಿದ್ದಾರೆ. ಖ್ಯಾತ ನಿರೂಪಕ ದಾನಿಶ್ ಸೇಠ್ ಜತೆ ಮಾತನಾಡುತ್ತಾ ವಿರಾಟ್ ಕೊಹ್ಲಿ ಇತ್ತೀಚಿನ ಘಟನೆಯೊಂದನ್ನು ವಿವರಿಸಿದ್ದಾರೆ. ದಾನಿಷ್ ಮಾತನಾಡುತ್ತಾ, ಫ್ರೇಜರ್ ಟೌನ್ ಗೆ ವಿರಾಟ್ ಏಕಾಂಗಿಯಾಗಿ ಹೋಗಿದ್ದರ ಬಗ್ಗೆ ಕೇಳಿದ್ದರು. ಈ ಬಗ್ಗೆ ಕೊಹ್ಲಿ ಉತ್ತರಿಸಿದ್ದಾರೆ. ಅನುಷ್ಕಾ ಶರ್ಮಾ ಫ್ರೇಜರ್ ಟೌನ್ನಲ್ಲಿರುವ ಥಾಮಸ್ ಬೇಕರಿಯ ಬಗ್ಗೆ ಹೇಳುತ್ತಿದ್ದರಂತೆ. ಅಲ್ಲಿ ಸಿಗುವ ಪಫ್ ಅದ್ಭುತವಾಗಿರುತ್ತದೆ ಎಂದು ಅನುಷ್ಕಾ ಹೇಳಿದ್ದನ್ನು ವಿರಾಟ್ ಸ್ಮರಿಸಿದ್ದಾರೆ. ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಗಿದ ನಂತರ ವಿರಾಟ್ ಥಾಮಸ್ ಬೇಕರಿಗೆ ತೆರಳಿದ್ದರಂತೆ. ಅವರು ಮಾಸ್ಕ್ ಹಾಗೂ ಕ್ಯಾಪ್ ಧರಿಸಿ ಬೇಕರಿಗೆ ತೆರಳಿದರಂತೆ. ‘‘ಎಲ್ಲರೂ ಅವರವರಿಗೆ ಬೇಕಾದ ತಿನಿಸುಗಳನ್ನು ಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು. ಅಲ್ಲದೇ ಆ ಅವತಾರದಲ್ಲಿ ಯಾರೂ ನನ್ನನ್ನು ಗುರುತಿಸಲಿಲ್ಲ ಎಂದಿದ್ದಾರೆ.