ಬೆಂಗಳೂರು,ಫೆ.4-
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಿರುವ ಹಿನ್ನೆಲೆಯಲ್ಲಿ ದಂಡ ಪಾವತಿಗೆ ನಗರದಲ್ಲಿ ಸಾರ್ವಜನಿಕರು ಮುಗಿಬಿದ್ದಿದ್ದಾರೆ. ರಿಯಾಯಿತಿ ಆರಂಭಗೊಂಡ ಮೊದಲ ದಿನವಾದ ನಿನ್ನೆ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ನಗರದ ಸಂಚಾರ ಪೊಲೀಸ್ ಠಾಣೆಗಳಿಗೆ ತೆರಳಿ ಬಾಕಿ ದಂಡದ ಮೊತ್ತ ಪಾವತಿಸಿದ್ದು, ಮೊದಲ ದಿನವೇ 5.6 ಕೋಟಿ ಸಂಗ್ರಹವಾಗಿದ್ದು, ಅದು 10 ಕೋಟಿ ರೂ ಗಳಿಗಿಂತ ಹೆಚ್ಚಾಗುವ ನಿರೀಕ್ಷೆಯಿದೆ.
ರಿಯಾಯಿತಿಯ ಪಾವತಿಗೆ ರಾಜ್ಯ ಸರ್ಕಾರ ಫೆ.11ರವರೆಗೆ ಅವಕಾಶ ನೀಡಿದ್ದು, ದಂಡ ಸಂಗ್ರಹವು 30 ಕೋಟಿಗೂ ಮಿಗಿಲಾಗುವ ಸಾಧ್ಯತೆಯಿದೆ. ನಗರದ ಸಂಚಾರ ಪೊಲೀಸ್ ಠಾಣೆಗಳು ಮಾತ್ರವಲ್ಲದೆ, ಇನ್ಫಾಂಟ್ರಿ ರಸ್ತೆ (Infantry Road) ಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ(TMC) ದಲ್ಲಿ ಕೌಂಟರ್ ತೆರೆದು ಬಾಕಿ ದಂಡದ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲಾಗಿರುವುದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳತೊಡಗಿರುವುದರಿಂದ ದಂಡ ಪಾವತಿಗೆ ಭಾರಿ ಪ್ರಮಾಣದ ಜನಸಂದಣಿ ಉಂಟಾಗಿದೆ.
ಇನ್ನು ಕರ್ನಾಟಕ ಒನ್ ವೆಬ್‌ಸೈಟ್ (Karnataka One Website) ಹಾಗೂ ಪೇಟಿಎಂ ಆ್ಯಪ್ (Paytm App) ನಲ್ಲಿ ಬಾಕಿ ದಂಡ ಪಾವತಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ವಾಹನ ನೋಂದಣಿ ಸಂಖ್ಯೆ ನಮೂದಿಸಿದರೆ, ಆ ವಾಹನದ ವಿರುದ್ಧ ದಾಖಲಾದ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳ ಸಂಖ್ಯೆ ಹಾಗೂ ರಿಯಾಯಿತಿ ದಂಡದ ಮೊತ್ತ ತೆರೆದುಕೊಳ್ಳಲಿದೆ. ಈ ವೇಳೆ ಆನ್‌ಲೈನ್‌ನಲ್ಲಿ ಸಾರ್ವಜನಿಕರು ಆ ದಂಡದ ಮೊತ್ತವನ್ನು ಪಾವತಿಸಬಹುದಾಗಿದೆ. ಸಂಚಾರ ಪೊಲೀಸ್ ಠಾಣೆಗಳು ಹಾಗೂ ಟಿಎಂಸಿ ಕಟ್ಟಡದಲ್ಲಿ ದಂಡ ಪಾವತಿಸುವವರ ಸಂಖ್ಯೆಗಿಂತ ಆನ್‌ಲೈನ್‌ನಲ್ಲಿ ಬಾಕಿ ದಂಡ ಪಾವತಿ ಮಾಡಿದವರ ಸಂಖ್ಯೆ ಹೆಚ್ಚಿತ್ತು.
ಏಕಕಾಲಕ್ಕೆ ನಿನ್ನೆ ಭಾರೀ ಸಂಖ್ಯೆ ಜನರು ಬೆಂಗಳೂರು ಸಂಚಾರ ಪೊಲೀಸ್ ವೆಬ್‌ಸೈಟ್ ಮುಖಾಂತರ ಆನ್‌ಲೈನ್‌ನಲ್ಲಿ ಬಾಕಿ ದಂಡ ಪಾವತಿಗೆ ಮುಂದಾದ ಹಿನ್ನೆಲೆಯಲ್ಲಿ ವೆಬ್‌ಸೈಟ್‌ನ ಸರ್ವರ್ ಡೌನ್ ಆಗಿ ಕೊನೆಗೆ ವೆಬ್ ಪೇಜ್ ತೆರೆಯದಂತಾಗಿತ್ತು. ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎಚ್ಚೆತ್ತ ಸಂಚಾರ ಪೊಲೀಸರು, ಸರ್ವರ್ ದುರಸ್ತಿಗೆ ಕ್ರಮ ಕೈಗೊಂಡರು. ಆದರೂ ಸಂಜೆವರೆಗೂ ವೆಬ್‌ಸೈಟ್‌ನ ಸರ್ವರ್ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸಿತು. ಇನ್ನು ಸಾಕಷ್ಟು ಮಂದಿ ಪೆಟಿಎಂ ಆ್ಯಪ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡದ ಮೊತ್ತ ಪಾವತಿಸಿದ್ದು, ಇಂದು ಪಾವತಿಸುವ ಸಾರ್ವಜನಿಕರ ಸಂಖ್ಯೆ ದುಪ್ಪಟ್ಟು ಆಗಿದೆ.
ಕೆಲವು ವಾಹನಗಳ ವಿರುದ್ಧ 10ರಿಂದ 15 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿಯಿದ್ದು, ದಂಡದ ಮೊತ್ತವೇ .10 ಸಾವಿರಕ್ಕೂ ಅಧಿಕವಿರುತ್ತದೆ. ಭಾರೀ ಪ್ರಮಾಣದ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಈ ಶೇ.50ರ ರಿಯಾಯಿತಿಯ ಅವಕಾಶ ವರದಾನವಾಗಿದೆ.
ಈ ಹಿಂದೆ ಕೆಲ ವಾಹನ ಸವಾರರು 30, 40 ಸಾವಿರ ದಂಡದ ಮೊತ್ತ ಬಾಕಿ ಉಳಿಸಿಕೊಂಡು ಪೊಲೀಸರಿಗೆ ಸಿಕ್ಕಿಬಿದ್ದು ಪೇಚಿಗೆ ಸಿಲುಕಿದ ನಿದರ್ಶನಗಳು ಇವೆ. ಹೀಗಾಗಿ ಹೆಚ್ಚಿನ ದಂಡ ಮೊತ್ತ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರು ಈ ರಿಯಾಯಿತಿ ಅವಕಾಶವನ್ನು ಹೆಚ್ಚಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

