ಬೆಂಗಳೂರು,ಮಾ.16:
ಬ್ಯಾಂಕ್ ದರೋಡೆಗೆಂದು ಉತ್ತರ ಪ್ರದೇಶದಿಂದ ಕರ್ನಾಟಕಕ್ಕೆ ಆಗಮಿಸಿ ದಾವಣಗೆರೆ ಸಮೀಪದ ಹೊನ್ನಾಳಿಯಲ್ಲಿ ಬ್ಯಾಂಕ್ ದೋಚಲು ಸಜ್ಜುಗೊಂಡಿದ್ದ ತಂಡವೊಂದನ್ನು ರಾಜ್ಯ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಹೆಡೆಮುರಿ ಕಟ್ಟಿದ್ದಾರೆ.
ಬ್ಯಾಂಕ್ ದರೋಡೆಗೆ ಹೊಂಚು ಹಾಕಿ ಹೊರಟಿದ್ದ ತಂಡವನ್ನು ಹೊನ್ನಾಳಿ ಚೆಕ್ ಪೋಸ್ಟ್ ನಲ್ಲಿ ಅಡ್ಡ ಕಟ್ಟಿದ ಪೊಲೀಸರು ನಂತರ ಅರಭಘಟ್ಟ ಬಳಿ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಹಾರಿಸಿದ ಗುಂಡಿನಿಂದ ಓರ್ವ ಗಾಯಗೊಂಡು ಸಿಕ್ಕಿ ಬಿದ್ದರೆ ಪರಾರಿಯಾಗಲು ಯತ್ನಿಸಿದ ಉತ್ತರ ಪ್ರದೇಶ ಮೂಲದ ಹಜರತ್ ಆಲಿ (50), ಅಸ್ಲಾಂ ಟನ್ ಟನ್ (55), ಕಮರುದ್ದೀನ್ ಅಲಿಯಾಸ್ ಬಾಬು ಸೆರಲಿ (40) ಎಂಬುವವರನ್ನು ಬಂಧಿಸಲಾಗಿದೆ.
ದರೋಡೆಕೋರರ ಗ್ಯಾಂಗ್ ಬ್ಯಾಂಕ್ ದರೋಡೆಗೆ ಬಂದಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾವಣಗೆರೆ ಜಿಲ್ಲಾ ಪೊಲೀಸರು ಅಲರ್ಟ್ ಆಗಿ ಕಾರ್ಯಾಚರಣೆಗೆ ಇಳಿದಿದ್ದರು. ಹೊನ್ನಾಳಿ ಬಳಿ ಪೊಲೀಸರ ತಂಡ ನಾಕಬಂಧಿ ಮಾಡಿ ಕಳೆದ ರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದರು. ಎರೆಟಿಗಾ ಹಾಗೂ ಮಹೀಂದ್ರ ಎಸ್‌ಯುವಿ 500 ಉತ್ತರ ಪ್ರದೇಶ ನೋಂದಣಿಯ ಕಾರು ಹರಿಹರದ ಕಡೆಯಿಂದ ನ್ಯಾಮತಿ ಕಡೆಗೆ ಹೋಗುತ್ತಿತ್ತು.
ಈ ವೇಳೆ ಇವರನ್ನು ಹೊನ್ನಾಳಿ ಬಳಿಯ ಚೆಕ್‌ಪೋಸ್ಟ್‌ನಲ್ಲಿ ತಡೆಯಲು ಪೊಲೀಸರು ಯತ್ನಿಸಿದ್ದಾರೆ. ಈ ವೇಳೆ ಅವರು ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾದರು.ನಂತರ ಪೊಲೀಸರು ಅವರ ಕಾರನ್ನು ಬೆನ್ನಟ್ಟಿದಾಗ ಅರಬಘಟ್ಟ ಬಳಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಅರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿ ಕಾನ್ಸ್ ಟೇಬಲ್ ಅನಂದ್ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ದರೋಡೆಕೋರರು ದಾಳಿ ನಡೆಸುತ್ತಿದ್ದಂತೆ ಆತರಕ್ಷಣೆಗಾಗಿ ಇನ್‌ಸ್ಪೆಕ್ಟರ್ ರವಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಆತರಕ್ಷಣೆಗಾಗಿ ಹಾರಿಸಿದ ಒಂದು ಗುಂಡು ಗುಡ್ಡು ಅಲಿಯಾನ್ ಗುಡು ಖಾಲಿಯಾ(45) ಕಾಲಿಗೆ ಗುಂಡು ತಗುಲಿ ಕುಸಿದು ಬಿದ್ದಿದ್ದಾನೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ.
ಆರೋಪಿಗಳು ಕರ್ನಾಟಕದಲ್ಲಿ 2014ರಿಂದ 2024ರವರೆಗೆ ರಾಜ್ಯದ ಹಲವೆಡೆ ಬ್ಯಾಂಕ್‌ಗಳು ಸೇರಿದಂತೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.
ಈ ಆರೋಪಿಗಳು Bengaluru ಗ್ರಾಮಾಂತರ ಜಿಲ್ಲೆಯ ಹೊಸಹಳ್ಳಿ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ 3.33,82.940 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದರೆಂದು ಗೊತ್ತಾಗಿದೆ. ಇದಲ್ಲದೇ ಕೊಪ್ಪಳದ ಬೇವೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ 1.46,55,905 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತಿತ್ತರ ವಸ್ತುಗಳ ಪ್ರಕರಣ ಕೂಡ ಬಳಕಿಗೆ ಬಂದಿದೆ.
ಶಿವಮೊಗ್ಗದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಎಲೆಕ್ಟ್ರಾನಿಕ್ ವಸ್ತುಗಳ ಕಳ್ಳತನ, ಹಾವೇರಿ ಜಿಲ್ಲೆಯ ತಡಸಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಜ್ಯುವೆಲ್ಲರಿ ಅಂಗಡಿ ಕಳ್ಳತನ ಪ್ರಕರಣದಲ್ಲಿ ಇವರು ಭಾಗಿಯಾಗಿದ್ದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ