ಹಾಸನ,ಮೇ.11-ಪಿಎಸ್ಐ ಹಗರಣದಲ್ಲಿ ಬಂಧನಕ್ಕೊಳಗಾದ ಆರೋಪಿಯ ಅಣ್ಣ ಇಂದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹೊಳೆನರಸೀಪುರ ತಾಲೂಕಿನ ಗುಂಜೇವು ಗ್ರಾಮದಲ್ಲಿ ನಡೆದಿದೆ.
ಗುಂಜೇವು ಗ್ರಾಮದ ಮನುಕುಮಾರ್ ಅಣ್ಣ ವಾಸು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿಎಸ್ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಮನುಕುಮಾರ್ ಹೆಸರಿತ್ತು. ಪಟ್ಟಿಯಲ್ಲಿ ಮನುಕುಮಾರ್ 50ನೇ ಱಂಕ್ ಪಡೆದಿದ್ದ. ತಮ್ಮನ ಬಂಧನದಿಂದ ಅಣ್ಣ ಸಾಕಷ್ಟು ನೊಂದಿದ್ದು, ತಮ್ಮ ಪಿಎಸ್ಐ ಆಗಲಿ ಎಂದು ಸಾಲ ಮಾಡಿ ಅಣ್ಣ ಹಣ ನೀಡಿರುವ ಶಂಕೆ ವ್ಯಕ್ತವಾಗಿದೆ.
ತಮ್ಮ ಪಿಎಸ್ಐ ಆಗಲಿಲ್ಲ, ಕೊಟ್ಟ ಹಣ ಮತ್ತೆ ಕೈಸೇರಿರಲಿಲ್ಲ. ಇದರಿಂದ ಮನನೊಂದು ವಾಸು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಏ. 30ರಂದು ಹೈಗ್ರೌಂಡ್ಸ್ ಠಾಣೆ ಪೊಲೀಸರು ಮನುಕುಮಾರ್ ನನ್ನು ಬಂಧಿಸಿಊರಿಗೆ ಕರೆದೊಯ್ದು ಮಹಜರು ಮಾಡಿದ್ದಾರೆ. ಪ್ರಸ್ತುತ ಮನುಕುಮಾರ್ ಸಿಐಡಿ ಪೊಲೀಸರ ವಶದಲ್ಲಿದ್ದಾನೆ. ಮನುಕುಮಾರ್ ನನ್ನು ಅಂತಿಮ ದರ್ಶನಕ್ಕೆ ಕರೆದೊಯ್ಯಲು ವಕೀಲ ಲೋಹಿತ್ ಅರ್ಜಿ ಸಲ್ಲಿಸಿದ್ದಾರೆ.
ಮೃತ ವಾಸು ತಾಯಿ ಶಿವಮ್ಮ, ನನ್ನ ಮಗನ ಸಾವಿಗೂ, ಪಿಎಸ್ಐ ಅಕ್ರಮಕ್ಕೂ ಸಂಬಂಧ ಇಲ್ಲ. ಹಿರಿಯ ಮಗ ವಾಸು ಆತ್ಮಹತ್ಯೆಗೆ ಯಾವುದೇ ಸಂಬಂಧ ಇಲ್ಲ. ಹಣ ಕಳೆದುಕೊಂಡ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಅನುಮಾನ ಇದೆ ಎಂದು ಹೇಳಿದರು