ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಶನಿವಾರ ರಕ್ಷಣಾ ಸಚಿವರು ಪ್ರಯಾಣಿಸುತ್ತಿದ್ದ ವಿಮಾನ ಸೇರಿ 11 ವಿಮಾನಗಳ ಮಾರ್ಗ ಬದಲಿಸಲಾಗಿದೆ.
ಎಲ್ಲ 11 ವಿಮಾನಗಳಿಗೆ ದೇಶದ ವಿವಿಧ ಸ್ಥಳಗಳ ವಿಮಾನ ನಿಲ್ದಾಣಗಳಲ್ಲಿ ಇಳಿಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಸಚಿವ ರಾಜನಾಥಸಿಂಗ್ ಅವರು ಗುಜರಾತ್ನ ವಡೋದರಾದ ಶ್ರೀ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ದೆಹಲಿಗೆ ಹಿಂತಿರುಗುತ್ತಿದ್ದರು. ಪ್ರತಿಕೂಲ ಹವಾಮಾನದಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಿಮಾನ ಸೇರಿದಂತೆ ಕನಿಷ್ಠ 11 ವಿಮಾನಗಳನ್ನು ಅಹಮದಾಬಾದ್, ಜೈಪುರ, ಲಖನೌ ಮತ್ತು ಆಗ್ರಾದಲ್ಲಿ ಇಳಿಸಲಾಗಿದೆ ಎಂದು ತಿಳಿದುಬಂದಿದೆ.