ಬೆಂಗಳೂರು,ಜು.10:
ಅಧಿಕಾರ ಹಸ್ತಾಂತರ ಕುರಿತು ರಾಜ್ಯ ಕಾಂಗ್ರೆಸ್ಸಿನಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಆಗಿರುವ ತಾವು 5 ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸುತ್ತೇನೆ ಅಷ್ಟೇ ಅಲ್ಲ ಮುಂದಿನ ವಿಧಾನಸಭೆ ಚುನಾವಣೆಯನ್ನು ನನ್ನ ನೇತೃತ್ವದಲ್ಲಿ ಎದುರಿಸಲಾಗುತ್ತದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಒಬ್ಬಿಬ್ಬರು ಶಾಸಕರ ಬೆಂಬಲ ನೀಡಿರಬಹುದು ಹಾಗೆಂದ ಮಾತ್ರಕ್ಕೆ ಅವರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಹೇಳಿದರು
ನಾನು 5 ವರ್ಷಗಳ ಅವಧಿ ಮುಖ್ಯ ಮಂತ್ರಿಯಾಗಿ ಪೂರ್ಣಗೊಳಿಸುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ.ಜುಲೈ ಎರಡರಂದು ನಾನು ಈ ಹೇಳಿಕೆ ನೀಡಿದಾಗ ಡಿ.ಕೆ.ಶಿವಕುಮಾರ್ ಕೂಡ ಜೊತೆಯಲ್ಲೇ ಇದ್ದರು. ಮುಂದಿನ 2028 ರ ವಿಧಾನಸಭೆ ಚುನಾವಣೆಗೂ ನನ್ನದೇ ನಾಯಕತ್ವ ಇರುತ್ತದೆ ಎಂದರು.
ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಶ್ರಮ ವಹಿಸಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರೇ ಆ ಸ್ಥಾನದಲ್ಲಿದ್ದರೂ ಅದೇ ರೀತಿ ಕೆಲಸ ಮಾಡಬೇಕು. ಡಿ.ಕೆ.ಶಿವಕುಮಾರ್ ಕೂಡ ತಮ್ಮ ಕರ್ತವ್ಯ ಮಾಡಿದ್ದಾರೆ ಎಂದು ಹೇಳಿದರು
ಕಾಂಗ್ರೆಸ್ ಶಾಸಕರ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಿದ ವೇಳೆ ನಾಯಕತ್ವ ಬದಲಾವಣೆಯ ಬಗ್ಗೆ ಪ್ರಶ್ನೆ ಕೇಳಲಾಗಿಲ್ಲ, ಯಾವ ಶಾಸಕರೂ ಸಭೆಯಲ್ಲಿ ಈ ಕುರಿತು ಅಭಿಪ್ರಾಯ ಹೇಳಿಲ್ಲ. ಕೆಲ ಶಾಸಕರು ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೆ ಅದು ಹೆಚ್ಚಿನ ಸಂಖ್ಯೆಯಲ್ಲಿಲ್ಲ ಎಂದು ತಿಳಿಸಿದರು
ಎರಡೂವರೆ ವರ್ಷಗಳ ಅವಧಿಗೆ ಸೀಮಿತವಾಗಿ ಅಧಿಕಾರ ಹಂಚಿಕೆಯಾಗಿದೆ ಎಂಬುದು ಸರಿಯಲ್ಲ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು, ಡಿ.ಕೆ.ಶಿವಕುಮಾರ್ ಮತ್ತು ಎಲ್ಲರೂ ಅದನ್ನು ಅನುಸರಿಸುತ್ತೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಈ ವಿಚಾರವಾಗಿ ತಮ್ಮ ಬಳಿ ಏನನ್ನೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು
ಸುರ್ಜೇವಾಲ ಸಭೆ ನಡೆಸಿದ ವೇಳೆ ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗಳು ಯಾವ ರೀತಿ ಅನುಷ್ಠಾನಗೊಂಡಿವೆ, ಏನೆಲ್ಲಾ ಅಭಿವೃದ್ಧಿ ಕೆಲಸಗಳಾಗಿವೆ, ಸರ್ಕಾರದಿಂದ ಮತ್ಯಾವ ರೀತಿಯ ಕೆಲಸಗಳಾಗಬೇಕು ಎಂಬ ಪ್ರಶ್ನೆಗಳನ್ನಷ್ಟೇ ಕೇಳಿದ್ದಾರೆ. ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಯೇ ಆಗಿಲ್ಲ. ಹೀಗಾಗಿ ತಾವು ಮುಂದಿನ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತೇನೆ. ಸದ್ಯಕ್ಕೆ ಕುರ್ಚಿ ಖಾಲಿ ಇಲ್ಲ ಎಂದರು.
ಸದ್ಯಕ್ಕೆ ಮಂತ್ರಿಮಂಡಲ ಪುನರ್ ರಚನೆ ಅಥವಾ ವಿಸ್ತರಣೆಯ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಆ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.