ಬೆಂಗಳೂರು,ಜು.31:
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಕರ್ಮಕಾಂಡದ ವಿರುದ್ಧ ಜನಾಂದೋಲನಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿರುವ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಬಿಕ್ಕಟ್ಟು ಬಹಿರಂಗಗೊಂಡಿದೆ.
ರಾಜ್ಯ ಬಿಜೆಪಿ ನಾಯಕರ ಕಾರ್ಯವೈಖರಿ ಬಗ್ಗೆ ಆರಂಭದಿಂದಲೂ ಅಸಮಾಧಾನ ಹೊಂದಿರುವ ಕೇಂದ್ರ ಮಂತ್ರಿ ಕುಮಾರಸ್ವಾಮಿ ಇದೀಗ ರಾಜ್ಯ ನಾಯಕರ ಕಾರ್ಯ ವೈಖರಿ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಹಾಸನದ ಬೀದಿಯಲ್ಲಿ ಪೆನ್‌ಡ್ರೈವ್ ಹಂಚಲು ಯಾರು ಕಾರಣ. ಅಂಥವರನ್ನು ಜೊತೆಯಲ್ಲಿ ಕೂರಿಸಿಕೊಂಡು ನಮನ್ನು ಸಭೆಗೆ ಕರೆಯುತ್ತಾರೆ. ನಮ ಕುಟುಂಬಕ್ಕೆ ವಿಷ ಹಾಕಿದವರನ್ನು ಸಭೆಗೆ ಕೂರಿಸಿಕೊಳ್ಳುತ್ತಾರೆ ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಪಾದಯಾತ್ರೆ ಮಾಡಬೇಕೆಂಬ ನಿರ್ಧಾರ ಮಾಡಿದ್ದಾರೆ. ನಮಗೆ ಮಾಹಿತಿಗಾಗಿ ಹೇಳಿದ್ದಾರೆ ಅಷ್ಟೇ. ಪಾದಯಾತ್ರೆ ವಿಚಾರದಲ್ಲಿ ಸರಿಯಾದ ರೀತಿ ನಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಮೇಲೆ ನಾವು ಏಕೆ ಬೆಂಬಲ ಕೊಡಬೇಕೆಂದು ಪ್ರಶ್ನಿಸಿದರು.
ಪಾದಯಾತ್ರೆ ಕಾರ್ಯಕ್ರಮದ ಮುಖ್ಯಸ್ಥರಾಗಿ ಮಾಜಿ ಶಾಸಕ ಪ್ರೀತಂ ಗೌಡರನ್ನು ಬಿಂಬಿಸಲಾಗುತ್ತಿದೆ. ಆ ಪ್ರೀತಂಗೌಡ ಯಾರು? ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಸರ್ವನಾಶ ಮಾಡಲು ಹೊರಟವರನ್ನು ಸಭೆಗೆ ಕರೆದು ಕೂರಿಸುತ್ತಾರೆ. ನನ್ನನ್ನು ಆಹ್ವಾನಿಸುತ್ತಾರೆ. ನನಗೂ ಸಹಿಸಿಕೊಳ್ಳಲು ಇತಿಮಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಿಂದ ಮೈಸೂರಿನವರೆಗೆ ನಮ ಶಕ್ತಿ ಪ್ರಬಲವಾಗಿದೆ. ರಾಜಕಾರಣವೇ ಬೇರೆ, Election ಬಂದಾಗ ಒಟ್ಟಿಗೆ ಹೋಗುವುದು ಬೇರೆ. ಆದರೆ ಇಂತಹ ಹೋರಾಟದ ವಿಚಾರದಲ್ಲಿ ವಿಶ್ವಾಸಕ್ಕೆ ಪಡೆಯದಿರುವುದು ಮನಸ್ಸಿಗೆ ತುಂಬ ನೋವಾಗಿದೆ
ಬಿಜೆಪಿ ನಾಯಕರು ತೀರ್ಮಾನ ತೆಗೆದುಕೊಂಡು ಹೋರಾಟ ಮಾಡುತ್ತಿದ್ದಾರೆ. ಆದರೆ ನಾವು ಪಾದಯಾತ್ರೆಗೆ ಸೂಕ್ತ ಸಂದರ್ಭವಲ್ಲ ಎಂದು ಹಿಂದೆ ಸರಿದಿದ್ದೇವೆ. ನಮಗೆ ಜನರ ಸಮಸ್ಯೆ ಬಗೆಹರಿಸುವುದು ಮುಖ್ಯ ಎಂದು ಹೇಳಿದರು
ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದಾರೆ. ಒಂದು ಕುಟುಂಬವನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುವುದು ಬೇಡ. ಈ ಸಂದರ್ಭದಲ್ಲಿ ಜನರ ನೋವಿಗೆ ಅವರ ಭಾವನೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಕೇವಲ ರಾಜಕೀಯವೇ ಮುಖ್ಯವಲ್ಲ.ಉತ್ತರ ಕರ್ನಾಟಕದ ನೂರಾರು ಗ್ರಾಮಗಳು ಜಲಾವೃತ್ತವಾಗಿದೆ. ಹಲವು ಕುಟುಂಬಗಳು ಬೀದಿಗೆ ಬಂದಿವೆ. ಇಂತಹ ಸಮಯದಲ್ಲಿ ಪಾದಯಾತ್ರೆ ಸೂಕ್ತವಲ್ಲ. ಹೀಗಾಗಿ ನಿನ್ನೆ ಕೋರ್ ಕಮಿಟಿ ಸಭೆಯಲ್ಲಿ ಪಾದಯಾತ್ರೆಯಲ್ಲಿ ಭಾಗಿಯಾಗದಿರಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿವರಿಸಿದರು.
Previous Articleವಯನಾಡ್ ಗೆ ತೆರಳಿದ ಸಂತೋಷ್ ಲಾಡ್.
Next Article ವಿಜಯೇಂದ್ರ ಕಿವಿ ಹಿಂಡಿದ ಅಮಿತ್ ಶಾ.