ಬೆಂಗಳೂರು, ಮೇ.10- ಪಿಎಸ್ ಐ ನೇಮಕಾತಿ ಪರೀಕ್ಷಾ ಅಕ್ರಮವು ಧಾರವಾಡದ ಪರೀಕ್ಷಾ ಕೇಂದ್ರಗಳಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಧಾರವಾಡದಲ್ಲಿ ನಿನ್ನೆಯಿಂದ ಸಿಐಡಿ ಅಧಿಕಾರಿಗಳು ಬೀಡುಬಿಟ್ಟಿದ್ದು, ಹು-ಧಾ ಅವಳಿ ನಗರದಲ್ಲಿ ಪರೀಕ್ಷೆ ನಡೆದಿರುವ 23 ಕೇಂದ್ರಗಳ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಧಾರವಾಡದ ಐದು ಕೇಂದ್ರಗಳಲ್ಲಿ ಪಿಎಸ್ಐ ಪರೀಕ್ಷೆ ನಡೆದಿತ್ತು. ಪರೀಕ್ಷೆ ನಡೆದಿದ್ದ ಕೇಂದ್ರಗಳಿಗೆ ಸಿಐಡಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಕ್ರಮದ ಸಂಬಂಧಿಸಿದಂತೆ ಇಲ್ಲಿಯವರೆಗೆ ಬಂಧಿತ ಆರೋಪಿಗಳು ನೀಡಿರುವ ಮಾಹಿತಿ ಹು-ಧಾ ಆಧರಿಸಿ ಅವಳಿ ನಗರದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
21 ಲಕ್ಷ ರೂ ವಂಚನೆ:
ಪಿಎಸ್ಐ ಹುದ್ದೆ ಕೊಡಿಸುವುದಾಗಿ 21 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 2019ರಲ್ಲಿ ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ಬಾಗೇಪಲ್ಲಿ ಮೂಲದ ಶಿಕ್ಷಕ ಸತ್ಯನಾರಾಯಣ ಎಂಬುವವರಿಗೆ ವಂಚನೆ ಮಾಡಿದ್ದಾರೆ. ಹುಬ್ಬಳ್ಳಿ ಮೂಲದ ನವೀನ್, ಸುಹಾಸ್, ಪವನ್ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.