ಬೆಂಗಳೂರು,ನ.22-
ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾನಸಿಕವಾಗಿ ಸಿದ್ದರಾಗಿಲ್ಲವಂತೆ.. ಇದು ಅವರ ವಕೀಲರು ಹೈಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣ ಪತ್ರ..
ತಮ್ಮ ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿದರು ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರಿಗೆ ಕೋರ್ಟ್
ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಕಾಡುತ್ತಿರುವ ಬೆನ್ನುನೋವು ಸೇರಿದಂತೆ ಹಲವು
ಅನಾರೋಗ್ಯದ ಕಾರಣ ನೀಡಿದ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಅಕ್ಟೋಬರ್ 30 ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ದರ್ಶನ್ ಅವರ ಆರೋಗ್ಯ ಸ್ಥಿತಿ ಕುರಿತಂತೆ
ಪ್ರತಿ ವಾರ ಕೋರ್ಟ್ ಗೆ ವೈದ್ಯಕೀಯ ವರದಿಯನ್ನು ಸಲ್ಲಿಕೆ ಮಾಡಬೇಕು. ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕೆಂದು ಕೋರ್ಟ್ ಷರತ್ತು ವಿಧಿಸಿತ್ತು.
ಅರ್ಜಿ ವಿಚಾರಣೆ ಸಂದರ್ಭದಲ್ಲಿ ದರ್ಶನ್ ಪರ ವಕೀಲರು ನಟನಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಹೀಗಾಗಿ ಮೂರು ತಿಂಗಳ ಜಾಮೀನು ಮಂಜೂರು ಮಾಡುವಂತೆ ಕೋರಿದ್ದರು. ಆದರೆ ಕೋರ್ಟ್ 6 ವಾರಗಳ ಜಾಮೀನು ಮಾತ್ರ ನೀಡಿತ್ತು.
ಶಸ್ತ್ರ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿತ್ತು.
ಆದರೆ ಜಾಮೀನು ಹಲವು ದಿನ ಕಳೆದರೂ ದರ್ಶನ್ ಅವರಿಗೆ ಇನ್ನೂ ಶಸ್ತ್ರಚಿಕಿತ್ಸೆ ನಡೆದಿಲ್ಲ. ಹೀಗಾಗಿ ಶಸ್ತ್ರ ಚಿಕಿತ್ಸೆ ಏಕೆ ನಡೆದಿಲ್ಲ ಎಂಬ ಪ್ರಶ್ನೆಗೆ ದರ್ಶನ್ ಪರ ವಕೀಲರು ಆರೋಗ್ಯಕ್ಕೆ ಸಂಬಂಧಿಸಿದ ಕಾರಣವನ್ನು ವರದಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.
ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡುವುದಕ್ಕೆ ತಯಾರಿ ಮಾಡಲಾಗುತ್ತಿದೆ. ದರ್ಶನ್ ಕೂಡ ಶಸ್ತ್ರಚಿಕಿತ್ಸೆಗೆ ತಯಾರಾಗುತ್ತಿದ್ದಾರೆ. ಆದರೆ ಅತಿಯಾದ ರಕ್ತದೊತ್ತಡ ಸಮಸ್ಯೆ ಎದುರಾಗಿದೆ. ಆಪರೇಷನ್ ಮಾಡಬೇಕಾದರೆ ರಕ್ತದೊತ್ತಡ ಸಮತೋಲನ ಆಗಿರಬೇಕು.
ದರ್ಶನ್ ರಕ್ತದೊತ್ತಡದ ಸಮಸ್ಯೆ ಸಮತೋಲನಕ್ಕೆ ಬರುತ್ತಿಲ್ಲ. ಇನ್ನೂ ದರ್ಶನ್ ಕೂಡ ಶಸ್ತ್ರ ಚಿಕಿತ್ಸೆಗೆ ಮಾನಸಿಕವಾಗಿ ಸಿದ್ದರಾಗಬೇಕಿದೆ. ಸದ್ಯಕ್ಕೆ ಕನ್ಸರ್ವೇಟಿವ್ ಚಿಕಿತ್ಸೆ ಮುಂದುವರೆದಿದೆ. ಫಿಸಿಯೋಥೆರಪಿ ಮತ್ತು ಔಷಧಗಳಿಂದ ಸಮಸ್ಯೆ ನಿಯಂತ್ರಣದಲ್ಲಿಡುವ ಪ್ರಯತ್ನ ನಡೆಯುತ್ತಿದೆ. ಇದಾದ ನಂತರ ವೈದ್ಯರು ಶಸ್ತ್ರ ಚಿಕಿತ್ಸೆಯ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲಿದ್ದು ಅದನ್ನು ನ್ಯಾಯಾಲಯದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.
Previous Articleಬಿಪಿಎಲ್ ಕಾರ್ಡ್ ರದ್ದುಪಡಿಸಲು ಹೇಳಿದ್ದು ಯಾರು ಗೊತ್ತಾ..?
Next Article ಕ್ಷಮೆ ಯಾಚಿಸಿದ ಪ್ರಹ್ಲಾದ್ ಜೋಶಿ.