ಬೆಂಗಳೂರು,ಜೂ.18-ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ ಗೆ ಸೇರಿದೆ ಎನ್ನಲಾದ ನಗರದ ಹೊರವಲಯದ ಆನೇಕಲ್ ಬಳಿಯ ಫಾರ್ಮ್ ಹೌಸ್ ನ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆನೇಕಲ್ ತಾಲ್ಲೂಕಿನ ಬಗ್ಗನದೊಡ್ಡಿಯಲ್ಲಿ ನಟ ದರ್ಶನ್‌ಗೆ ಸೇರಿದ ʼದುರ್ಗ ಫಾರ್ಮ್ ಹೌಸ್ ನ ಮ್ಯಾನೇಜರ್ ಶ್ರೀಧರ್ (35) ಆತ್ಮಹತ್ಯೆ ಮಾಡಿಕೊಂಡವರು.
ಕಳೆದ ಏಪ್ರಿಲ್ 17 ರಂದು ಶ್ರೀಧರ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು,ಎರಡು ತಿಂಗಳ ಹಿಂದೆ ಈ ಆತ್ಮಹತ್ಯೆ ನಡೆದಿದ್ದು,, ಪೊಲೀಸರು ಅನುಮಾನಾಸ್ಪದ ಸಾವು ದಾಖಲಿಸಿಕೊಂಡಿದ್ದರು. ಫಾರ್ಮ್ ಹೌಸ್ ಪಕ್ಕದಲ್ಲಿಯೇ ಈತ ವಿಷ ಸೇವಿಸಿ ರಕ್ತ ಕಾರಿಕೊಂಡು ಮೃತಪಟ್ಟಿದ್ದಾನೆ. ಬಗ್ಗನದೊಡ್ಡಿಯಲ್ಲಿ ಸುಮಾರು 2 ಎಕರೆ 36 ಗುಂಟೆ ಪ್ರದೇಶದಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಒಂದು ವರ್ಷ ಕಾಲ ಈತ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ. ಫಾರ್ಮ್ ಹೌಸ್ ಪಕ್ಕದ ಕಲ್ಲು ಬಂಡೆ ಮೇಲೆ ಶ್ರೀಧರ್ ಮೃತದೇಹ ಪತ್ತೆಯಾಗಿತ್ತು. ಶ್ರೀಧರ್ ಮೃತ ದೇಹ ಕಂಡು ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದ.
ಡೆತ್ ನೋಟ್ ನ್ನು ಶ್ರೀಧರ್ ಬರೆದಿಟ್ಟಿದ್ದು,ಅದರಲ್ಲಿ ತಾನು ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅದರಲ್ಲಿ ಬರೆದಿದ್ದಾನೆ. “ನನ್ನ ಸಾವಿಗೆ ನಾನೇ ಕಾರಣ. ಒಂಟಿತನ ಕಾಡುತ್ತಿದೆ. ಬದುಕಿದ್ದು ಮನೆ ಕಟ್ಟಬೇಕು ಎಂದು ಆಸೆ ಇತ್ತು. ಆಗಲಿಲ್ಲ. ನಾನು ಸತ್ತಮೇಲೆ ನನ್ನ ಗೋರಿ ಆದರೂ ಕಟ್ಟಿ” ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ. ಡೆತ್‌ನೋಟನ್ನು ಯಾವುದೇ ಚಿತ್ತು ಕಾಟಿಲ್ಲದೆ ಬರೆದು, ಹೆಸರು ಬರೆದು ಸಹಿ ಹಾಕಿ ಜೊತೆಗೆ ಹೆಬ್ಬೆಟ್ಟು ಗುರುತನ್ನೂ ಒತ್ತಿದ್ದಾನೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
“ನನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ” ಎಂದು ಮತ್ತೆ ಮತ್ತೆ ಡೆತ್‌ನೋಟ್‌ನಲ್ಲಿ ಶ್ರೀಧರ್ ಉಲ್ಲೇಖಿಸಿದ್ದಾನೆ. “ನನ್ನ ಅಮ್ಮ ಅಪ್ಪ ಅಕ್ಕಂದಿರು ಯಾರಾದರೂ ನನ್ನ ಸಾವಿನ ಬಗ್ಗೆ ಅನುಮಾನವಿದೆ ಎಂದು ಕಂಪ್ಲೇಂಟ್ ಕೊಟ್ಟರೆ ಅದನ್ನು ತಗೋಬೇಡಿ. ನಾನು ತುಂಬಾ ಯೋಚನೆ ಮಾಡಿ ನನ್ನ ಪ್ರಾಣ ಕಳೆದುಕೊಳ್ತಾ ಇದೇನೆ” ಎಂದು ಬರೆದಿದ್ದಾನೆ. ಇದೇ ಈಗ ಅನುಮಾನಕ್ಕೆ ಕಾರಣವಾಗಿದೆ. ದರ್ಶನ್ ಹೆಸರನ್ನು ಎಲ್ಲೂ ಈತ ಉಲ್ಲೇಖಿಸಿಲ್ಲ
Previous ArticleCID ವಿಚಾರಣೆ ಎದುರಿಸಿದ ಯಡಿಯೂರಪ್ಪ
Next Article ಭವಾನಿ ರೇವಣ್ಣ ಅವರಿಗೆ ಜಾಮೀನು ಸಿಕ್ತು.