ಬೆಂಗಳೂರು,ಸೆ.5- ಲಿಂಗರಾಜಪುರ ಫೈಓವರ್‌ನ ಕೆಳಗೆ ಕಿಡಿಗೇಡಿಯೊಬ್ಬ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಝಳಪಿಸುತ್ತಾ ದಾಂಧಲೆ ನಡೆಸಿದ್ದಾನೆ.ಅಲ್ಲದೆ ಗೂಡ್ಸ್ ಆಟೋ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಹಳೇ ದ್ವೇಷವೇ ಈ ದಾಂಧಲೆಗೆ ಕಾರಣ ಎಂದು ಶಂಕಿಸಲಾಗಿದ್ದು, ಆರೋಪಿಯ ಪುಂಡಾಟವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಲಿಂಗರಾಜಪುರ ಫ್ಲೈ ಓವರ್ ಕೆಳಗೆಗೂಡ್ಸ್ ಆಟೋ ಚಾಲಕನ ಮೇಲೆ ಕಿಡಿಗೇಡಿಯೊಬ್ಬ ಕತ್ತಿಯಂತಹ ಉದ್ದನೆಯ ಮಾರಕಾಸ್ತ್ರವನ್ನು ಹಿಡಿದು ಆತನ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ತಡೆಯಲು ಯತ್ನಿಸಿದಾಗ ಗೂಡ್ಸ್ ಆಟೋದ ಗಾಜುಗಳನ್ನು ಜಖಂಗೊಳಿಸಿದ್ದಾನೆ. ನಂತರ ಬೈಕ್ ಹತ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆರೋಪಿಯು ಚಾಲಕನೊಂದಿಗೆ ಹಿಂದಿನಿಂದಲೂ ದ್ವೇಷ ಹೊಂದಿದ್ದ ಎಂದು ಶಂಕಿಸಲಾಗಿದೆ.
ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಆರೋಪಿಯ ದಾಂಧಲೆಯನ್ನು ರೆಕಾರ್ಡ್ ಮಾಡಿದ್ದಾರೆ. ವಿಡಿಯೋದಲ್ಲಿ, ಆರೋಪಿಯು ಕೈಯಲ್ಲಿ ಉದ್ದನೆಯ ಆಯುಧವನ್ನು ಹಿಡಿದು ಗೂಡ್ಸ್ ಆಟೋ ಚಾಲಕನಿಗೆ ಬೆದರಿಕೆ ಒಡ್ಡುತ್ತಿರುವ ದೃಶ್ಯ ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವ ರೌಡಿಶೀಟರ್‌ಗಳ ಹಾವಳಿಯನ್ನು ಎತ್ತಿ ಹೇಳುತ್ತಿದೆ.
ಘಟನೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಲಿಂಗರಾಜಪುರ ಪೊಲೀಸರು ಆರೋಪಿಯನ್ನು ಗುರ್ತಿಸಲು ವಿಡಿಯೋ ಫುಟೇಜ್ ಪರಿಶೀಲಿಸಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
Previous Articleಬೆಂಗಳೂರಿನ ಮನೆ ಮಾಲೀಕರೇ ಎಚ್ಚರ !
Next Article ಮುಂಬೈ ಅನ್ನು ಬೆಚ್ಚಿ ಬೀಳಿಸಿದ್ದ ವ್ಯಕ್ತಿ ಅರೆಸ್ಟ್.