ಬೆಂಗಳೂರು,ಅ.24:
ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭೆಯ ಮೂರು ಕ್ಷೇತ್ರಗಳ ಉಪElectionಗೆ ಉಮೇದುವಾರಿಕೆ ಸಲ್ಲಿಸಲು ಒಂದು ದಿನ ಬಾಕಿ ಇರುವಂತೆಯೇ ಅಭ್ಯರ್ಥಿಗಳು ಭರಾಟೆ ರೋಡ್ ಶೋನ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಯೋಗೇಶ್ವರ್ ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬಸವರಾಜ ಬೊಮಾಯಿ ಸೇರಿದಂತೆ ಪ್ರಮುಖರು ನಾಮಪತ್ರ ಸಲ್ಲಿಸಿದರು.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ತುಕಾರಾಂ ಅವರ ಪತ್ನಿ ಅನ್ನಪೂರ್ಣ ಇ.ತುಕಾರಾಂ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆಯನ್ನು ಸಲ್ಲಿಸಿದರೆ, ರಾಜ್ಯ ಬಿಜೆಪಿ ಎಸ್ ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಜಿದ್ದಾಜಿದ್ದಿನ ಅಖಾಡವಾಗಿ ಪರಿಣಮಿಸಿರುವ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಕಾರ್ಯ ಬೃಹತ್ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಪರಿಣಮಿಸಿತು.
ತಾಲ್ಲೂಕು ಕಾಂಗ್ರೆಸ್ ಕಚೇರಿಯಿಂದ ತಹಶೀಲ್ದಾರ್ ಕಚೇರಿವರೆಗೆ ಒಂದು ಕಿಲೋಮೀಟರ್‌ಗೂ ದೂರ ನಡೆದ ರೋಡ್ ಷೋನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ವಿರುದ್ಧ ಸ್ವತಃ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಅವರ ಪತ್ನಿ, ಪುತ್ರ ಸೇರಿದಂತೆ ಯಾರೇ ಸ್ಪರ್ಧಿಸಿದರೂ ಸೋಲು ಖಚಿತ ಎಂದು ಹೇಳಿದರು
ಕ್ಷೇತ್ರದಿಂದ ಎರಡು ಸಲ ಗೆದ್ದು ಒಮ್ಮೆ ಮುಖ್ಯಮಂತ್ರಿಯಾದರೂ ಕುಮಾರಸ್ವಾಮಿ ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಈಗ ಎಲ್ಲಾ ಬಿಟ್ಟು ಮಂಡ್ಯ ಹಿಡಿದುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಕೆರೆಗಳು ತುಂಬಿದ್ದರೆ ಅದಕ್ಕೆ ಯೋಗೇಶ್ವರ್ ಕಾರಣ. ಅಭಿವೃದ್ಧಿ ಪರ ಕೆಲಸ ಮಾಡುವ ಇಂತಹ ನಮ್ಮ ಅಭ್ಯರ್ಥಿಯನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಐದು ಸಲ ಶಾಸಕರಾಗಿ, ಎರಡು ಸಲ ಸಚಿವರಾಗಿರುವ ಯೋಗೇಶ್ವರ್ ಮೂಲತಃ ಕಾಂಗ್ರೆಸ್ ನವರು. ನಮ್ಮ ಪಕ್ಷಕ್ಕೆ ವಾಪಸ್ ಬಂದ ಅವರನ್ನು ಅಭ್ಯರ್ಥಿ ಮಾಡಿದ್ದೇವೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಜನಪ್ರಿಯ ರಾಜಕಾರಣಿ. ಅವರಿಂದ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದರು
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಯೋಗೇಶ್ವರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿರುವುದರಿಂದ ತಾಲ್ಲೂಕಿನ ಜನರಿಗೆ ಹೊಸ ಹುರುಪು ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಸುರೇಶ್‌ಗೆ 85 ಸಾವಿರಕ್ಕೂ ಹೆಚ್ಚು ಮತ ಹಾಕಿ ಆಶೀರ್ವಾದ ಮಾಡಲು ಪ್ರಯತ್ನ ಮಾಡಿದಿರಿ. ಆದರೂ ಗೆಲ್ಲಲು ಆಗಲಿಲ್ಲ. ಆದರೂ ನಾವು ಕ್ಷೇತ್ರದ ಅಭಿವೃದ್ಧಿಯ ಬದ್ಧತೆ ಬಿಟ್ಟಿಲ್ಲ ಎಂದು ಹೇಳಿದರು.
ನನ್ನ ಮತ್ತು ಸುರೇಶ್ ನಂಬಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಹ ನಮ್ಮೊಂದಿಗೆ ಕೈ ಜೋಡಿಸುತ್ತಿದ್ದಾರೆ. ಅವರ ಕೈ ಬಲಪಡಿಸಿಕೊಂಡು ಮುಂದಕ್ಕೆ ಕರೆದೊಯ್ಯುತ್ತೇವೆ. ಸೋಲುವ ಭಯದಿಂದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿವೆಯೇ ಹೊರತು, ಅವರಿಗೆ ಅಭಿವೃದ್ಧಿಯ ಬದ್ಧತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸಂಡೂರು,:
ಗಣಿನಾಡು ಸಂಡೂರಿನಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಶಕ್ತಿ ಪ್ರದರ್ಶನ ನಡೆಸಿದರು ಸಚಿವರಾದ ಸಂತೋಷ್ ಲಾಡ್ ಜಮೀರ್ ಅಹ್ಮದ್ ಖಾನ್ ಅವರು ಮಾಜಿ ಸಚಿವರಾದ ನಾಗೇಂದ್ರ ಮತ್ತು ಅಲ್ಲಂ ವೀರಭದ್ರಪ್ಪ ಅವರೊಂದಿಗೆ ಬೃಹತ್ ರೋಡ್ ಶೋ ನಡೆಸಿ ಗಮನ ಸೆಳೆದರು.
ಸಂಡೂರಿನ ಎಪಿಎಂಸಿಯಿಂದ ತಾಲೂಕು ಆಡಳಿತದ ಕಚೇರಿವರೆಗೂ ರೋಡ್ ಶೋ ನಡೆಯಿತು. ಆನಂತರ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಚುನಾವಣಾ ಅಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಶಿಗ್ಗಾಂವಿ:
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಪತ್ನಿ ಇಬ್ಬನಿ ಹಾಗೂ ಬಿಜೆಪಿ ಮುಖಂಡರ ಜೊತೆ ಚುನಾವಣಾಧಿಕಾರಿ ಕಚೇರಿಗೆ ಬಂದಿದ್ದ ಭರತ್ ತಮ್ಮ ತಂದೆ ಸಂಸದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಾಂಕೇತಿಕವಾಗಿ ಮೊದಲನೇ ನಾಮಪತ್ರ ಸಲ್ಲಿಸಿದ್ದಾರೆ.
ನಾಳೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸೇರಿಕೊಂಡು ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
Previous Articleಅಕ್ಟೋಬರ್ 24 – ವಿಶ್ವ ಸಂಸ್ಥೆಯ ದಿನ
Next Article ಕಣಕ್ಕಿಳಿದ ನಿಖಿಲ್ ಕುಮಾರಸ್ವಾಮಿ.